ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಕಠಿಣ ನೀತಿ ಸಂಹಿತೆಯಡಿ ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ನೀತಿ ಸಂಹಿತೆ ನಿಯಮದ ಮೂಲಕ ಕುರುಡು ಕಾಂಚಾಣದ ಕುಣಿತಕ್ಕೆ ಅಂಕುಶ ಹಾಕಲು ಚು.ಆಯೋಗ ಅಖಾಡಕ್ಕೆ ಇಳಿದಿದೆ. ಆ ಮೂಲಕ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡಿದೆ.
ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅಖಾಡದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಇತ್ತ ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಲು ನಾನಾ ಕಸರತ್ತು ಆರಂಭಿಸಿವೆ. ಮತದರಾರಿಗೆ ಆಮಿಷಗಳನ್ನು ಒಡ್ಡಲು ರಾಜಕೀಯ ಪಕ್ಷಗಳು ಆರಂಭಿಸಿವೆ. ಆದರೆ, ನೀತಿ ಸಂಹಿತೆ ಮೂಲಕ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ರಾಜಕೀಯ ಪಕ್ಷಗಳ ಅಕ್ರಮಗಳಿಗೆ ನಿಯಂತ್ರಣ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತಿದೆ. ಈಗಾಗಲೇ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಐಟಿ ಅಧಿಕಾರಿಗಳು, ಇಡಿ, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿದೆ.
ಏನಿದು ಚುನಾವಣಾ ನೀತಿ ಸಂಹಿತೆ?:ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಮುಕ್ತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಅನುಸರಿಸುವ ಕಾನೂನು ಕ್ರಮವೇ ನೀತಿ ಸಂಹಿತೆ. ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಮತದಾನ ಮುಗಿಯುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಎಲ್ಲ ರಾಜಕೀಯ ಪಕ್ಷಗಳು, ಸರ್ಕಾರ, ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಪಾಲಿಸಬೇಕು.
ಯಾರಿಗೆ ಅನ್ವಯ?: ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು ಸೇರಿದಂತೆ ಸರ್ಕಾರದಿಂದ ಹಣಕಾಸಿನ ನೆರವು ಪಡೆಯವ ಪ್ರತಿಯೊಂದು ಸಂಸ್ಥೆ ಅಥವಾ ಕಚೇರಿಗಳು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡುವಂತಿಲ್ಲ. ಉದ್ಘಾಟನೆ, ಅಡಿಗಲ್ಲು, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಹೊಸ ಟೆಂಡರ್ ಕರೆಯುವಂತಿಲ್ಲ. ಅಭ್ಯರ್ಥಿಗಳು ಮತದಾರರಿಗೆ ನಗದು, ಮದ್ಯ, ವಸ್ತುಗಳು, ಯಾವುದೇ ಉಡುಗೊರೆ, ಆಮಿಷಗಳನ್ನು ಒಡ್ಡುವಂತಿಲ್ಲ.
ನೀತಿ ಸಂಹಿತೆ ಜಾರಿಯಾದ ಬಳಿಕ ಸಚಿವರು ಮತ್ತು ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ. ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹಗಳನ್ನು ಬಳಸುವಂತಿಲ್ಲ. ಸಚಿವರು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ನಿವಾಸದಿಂದ ಕಚೇರಿಗೆ ಬರಲು ಮಾತ್ರ ಸರ್ಕಾರಿ ವಾಹನ ಬಳಸಬಹುದು. ಸಚಿವರು ಬೆಂಗಳೂರು ಬಿಟ್ಟು ಹೊರಗಡೆ ಅಧಿಕೃತ ಭೇಟಿಗೆ ತೆರಳಬೇಕಾದರೆ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ಚುನಾವಣಾ ಪ್ರಚಾರ ಸಭೆ - ಸಮಾರಂಭ, ರ‍್ಯಾಲಿಗಳಿಗೆ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕ ಖಾತೆ ತೆರೆಯಬೇಕು. ಗರಿಷ್ಠ 40 ಲಕ್ಷ ರೂ. ಚುನಾವಣಾ ವೆಚ್ಚದ ಮಿತಿ ವಿಧಿಸಲಾಗುತ್ತದೆ.
ಕಳೆದ ಬಾರಿ ಜಪ್ತಿ ಮಾಡಲಾಗದ ನಗದು, ಮದ್ಯ, ವಸ್ತು: ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ಒಟ್ಟು 94 ಕೋಟಿ ನಗದು ಜಪ್ತಿ ಮಾಡಲಾಗಿತ್ತು. ಜೊತೆಗೆ 24.78 ಕೋಟಿ ಮೌಲ್ಯದ ಮದ್ಯ, ಇನ್ನುಳಿದಂತೆ ಸೀರೆ, ವಾಹನ ಸೇರಿ ಒಟ್ಟು 66 ಕೋಟಿ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಒಟ್ಟಾರೆ ಈ ಚುನಾವಣೆ ಸಂದರ್ಭದಲ್ಲಿ ಸುಮಾರು 185.74 ಕೋಟಿ ರೂ. ಮೊತ್ತದ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಚುನಾವಣಾ ಆಯೋಗ ಜಪ್ತಿ ಮಾಡಿತ್ತು.