ಬೆಂಗಳೂರು :ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಸ್ಸು ಬಹಳ ಕಡಿಮೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಗ್ಯಾರಂಟಿ ಜಾರಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಅವರ ತಪ್ಪುಗಳನ್ನು ಸದಾ ಎಳೆಎಳೆಯಾಗಿ ಜನರ ಮುಂದಿಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ತೆಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ. ಈ ಸರ್ಕಾರವೇ ಬೇಡ ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ. ಇದರ ಅವಧಿ ಇನ್ನೊಂದು ವರ್ಷವಾದರೆ ಹೆಚ್ಚು ಎಂದು ಅಭಿಪ್ರಾಯಪಟ್ಟರು.
24 ಶಾಸಕರನ್ನು ಕರೆದುಕೊಂಡು ಗುಂಡ್ಲುಪೇಟೆ ಚಾಮರಾಜನಗರದ ಕಡೆ ಹೋಗಲು ಜಾರಕಿಹೊಳಿ ಮುಂದಾಗಿದ್ದರು. ಜಾರಕಿಹೊಳಿ ಬ್ರದರ್ಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ನಾವು ಉಳಿಯುವುದಿಲ್ಲ ಎಂದು ಡಿಸಿಎಂ ಶಿವಕುಮಾರರಿಗೂ ಗೊತ್ತಿದೆ ಎಂದು ತಿಳಿಸಿದರು. ಚುನಾವಣೆಗೆ ಹಣ ಕೊಡದಿದ್ದರೆ ಹೈಕಮಾಂಡಿನ ಸಮಸ್ಯೆ. ಕಲೆಕ್ಷನ್‍ಗೆ ಇಳಿದರೆ ಇಲ್ಲಿ ಸಮಸ್ಯೆ. ಕಾಂಗ್ರೆಸ್ ಹಲವಾರು ತುಂಡುಗಳಾಗಿದೆ. ಇದು ಹೊರಗಡೆ ಬರಲು ಕೆಲವೇ ದಿನಗಳು ಉಳಿದಿವೆ ಎಂದು ತಿಳಿಸಿದರು.
ಬರಗಾಲ ಬಂದರೂ ಯಾರೂ ಕೂಡ ಪ್ರವಾಸ ಮಾಡುತ್ತಿಲ್ಲ. ಡಿ ಕೆ ಶಿವಕುಮಾರರು ಬೆಳಗಾವಿಗೆ ಹೋಗಿದ್ದು ಬೇರೆ ಉದ್ದೇಶಕ್ಕೆ, ಅಲ್ಲಿನ ಜಿಲ್ಲಾ ಸಚಿವರೇ ಅವರನ್ನು ಸ್ವಾಗತಿಸಿಲ್ಲ. ಸತೀಶ್ ಜಾರಕಿಹೊಳಿ ಸಂಬಂಧ ಸಮಸ್ಯೆ ಶುರುವಾಗಿದೆ. ಕಾಂಗ್ರೆಸ್ಸಿಗೆ ಒಳಗಿನಿಂದಲೂ ಸಮಸ್ಯೆ, ಹೊರಗಿನಿಂದಲೂ ಸಮಸ್ಯೆ. ಅವರ ತಲೆ ಮೇಲೆ ಅವರೇ ಬಂಡೆ ಹಾಕಿಕೊಂಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಡೈರಿ ನಿಪುಣರು ಯಾರೆಂದು ನಮಗೂ ಗೊತ್ತಿದೆ. ಗುತ್ತಿಗೆದಾರರಿಂದ ವಶಪಡಿಸಿಕೊಂಡದ್ದು ಬಿಜೆಪಿಯವರ ಹಣ ಎಂದು ಡಿಸಿಎಂ ಶಿವಕುಮಾರ್ ಅವರು ಹೇಳಿದ್ದೇ ನಿಜವಾದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಲು ಇರುವ ತೊಂದರೆಯಾದರೂ ಏನು ಸವಾಲೆಸೆದರು. ಇದು ಬಿಜೆಪಿಯವರ ಹಣವೆಂದು ಶಿವಕುಮಾರ ಅವರಿಗೆ ಗೊತ್ತಿದ್ದರೆ, ಆ ಸಂಬಂಧ ಡೈರಿ ಇದ್ದರೆ ಅದನ್ನು ಬಿಡುಗಡೆ ಮಾಡಲಿ. ಅದು ನಮ್ಮ ಹಣವಾಗಿದ್ದರೆ ನೀವ್ಯಾಕೆ ಹಿಂದೆ ಬೀಳುತ್ತೀರಿ? ಸಿಬಿಐ ತನಿಖೆ ಮಾಡಿಸಿ. ಸತ್ಯಾಸತ್ಯತೆ ಹೊರಗೆ ಬರಲಿ. ಒಂದು ವೇಳೆ ಇದನ್ನು ಸಿಬಿಐ-ಇಡಿ ತನಿಖೆಗೆ ವಹಿಸದಿದ್ದರೆ ಅದು ನಿಮ್ಮ ಹಣ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಹಣವಾದರೆ ತನಿಖೆ ಮಾಡಿಸಿ, ನಿಮ್ಮ ಹಣವಾಗಿದ್ದರೆ ಅದನ್ನು ನೀವು ಒಪ್ಪಿಕೊಂಡರೆ ಸಾಕು ಎಂದರು.
ಹೈಕಮಾಂಡ್ ಒತ್ತಡದ ಕಾರಣಕ್ಕೆ ಆತುರಾತುರವಾಗಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ತಡವಾಗಿದೆ ಎಂಬ ಕಾರಣಕ್ಕೆ ನಿನ್ನೆ ವೇಣುಗೋಪಾಲ್ ಬಂದರು. ಎಟಿಎಂ ಮಾಲೀಕ ಸುರ್ಜೇವಾಲಾ ಬಂದುಬಿಟ್ಟರು. ಚುನಾವಣೆ ಬಂದ ಕಾರಣ ಅವರಿಗೆ ಹಣ ಬೇಕಿದೆ. ಬೇಗಬೇಗನೆ ಕಲೆಕ್ಷನ್, ಬೇಗಬೇಗ ಡ್ರಾ ಮಾಡಲು ಬಂದಿದ್ದಾರೆ. ಸಿದ್ದರಾಮಯ್ಯರ ಸರ್ಕಾರ ಇಲ್ಲಿನ ಜನರಿಗೆ, ಅಭಿವೃದ್ಧಿ ಕಾರ್ಯದ ವಿಚಾರದಲ್ಲಿ ನುಡಿದಂತೆ ನಡೆಯುತ್ತಿಲ್ಲ. ಹೈಕಮಾಂಡಿಗೆ ನೀಡಿದ ವಚನ ಪಾಲಿಸುವುದರಲ್ಲಿ ವಿಳಂಬವಾದ ಕಾರಣ ಅಲ್ಲಿನ ನಾಯಕರು ತೆಲಂಗಾಣ, ಛತ್ತೀಸಗಡ, ಮಧ್ಯಪ್ರದೇಶಕ್ಕೆ ಹಣ ಕಳಿಸಿ ಎಂದು ಒತ್ತಡ ಹಾಕಲು ಇಲ್ಲಿ ಬಂದಿದ್ದಾರೆ ಎಂದು ಟೀಕಿಸಿದರು.
ಹಣದ ಬಗ್ಗೆ ಸಿಬಿಐ-ಇಡಿ ತನಿಖೆ ನಡೆಸಬೇಕು.. ಎನ್. ರವಿಕುಮಾರ್ :ರಾಜ್ಯದಲ್ಲಿ ಶಿವಾನಂದ ಪಾಟೀಲ, ಡಿ ಕೆ ಶಿವಕುಮಾರ್, ಬೈರತಿ ಸುರೇಶ್, ಯತೀಂದ್ರ, ಇತರ ಸಚಿವರು ಹಣ ಸಂಗ್ರಹಿಸಿದ್ದಾರೆ. ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹಣದ ವಹಿವಾಟು ನಡೆಯುತ್ತಿದೆ. ಇದೆಲ್ಲದರ ಕುರಿತು ಸಿಬಿಐ- ಇಡಿ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಆಗ್ರಹಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಐಟಿ ದಾಳಿ ಸಂದರ್ಭ 94 ಕೋಟಿ ನಗದು ಮತ್ತು 8 ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, 102 ಕೋಟಿ ರೂ. ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. 1 ಸಾವಿರ ಕೋಟಿ ರೂ. ಸಂಗ್ರಹಿಸಿದ ಮಾಹಿತಿ ಇದೆ ಎಂದು ತಿಳಿಸಿದರು. ಅಬಕಾರಿ, ಕೈಗಾರಿಕಾ ವಲಯ, ಎಲ್ಲ ಪೊಲೀಸ್ ಠಾಣೆಗಳಿಗೆ ಕಲೆಕ್ಷನ್ ಗುರಿ ಕೊಟ್ಟಿದ್ದಾರೆ. ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಸೇರಿ ಅಧಿಕಾರಿಗಳ ವರ್ಗಾವಣೆ ವೇಳೆ ಹಣ ಪಡೆದಿದ್ದಾರೆ. ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿ ವರ್ಗಾವಣೆಗೆ ಕನಿಷ್ಠ 1 ರಿಂದ 3 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು.
ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿ ಬೆಂಗಳೂರಿನಲ್ಲಿ ವಿಪರೀತ ಹಣ ಸಂಗ್ರಹಿಸಿದ್ದಾರೆ. ಅಂಥ ಸಾವಿರಾರು ಕೋಟಿ ಹಣವನ್ನು ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅದರಲ್ಲಿ ಎಷ್ಟು ಕಳುಹಿಸುತ್ತಾರೆ, ಎಷ್ಟು ಜೇಬಿಗೆ ಇಳಿಸುತ್ತಾರೆ ಎಂಬುದರ ತನಿಖೆಯೂ ಆಗಬೇಕಿದೆ ಎಂದು ಒತ್ತಾಯಿಸಿದರು.
ಕಳೆದೆರಡು ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಸೇರಿ 117ಕ್ಕೂ ಹೆಚ್ಚು ಕಡೆ ಬಿಜೆಪಿ ಹೋರಾಟ ಮಾಡಿದೆ. ನಮ್ಮ ಹೋರಾಟ ಮುಂದುವರೆಯಲಿದೆ. ತನಿಖೆಗೆ ಕೊಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 251ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಕುರಿತು ಒಂದು ಪೈಸೆ ಪರಿಹಾರ ನೀಡಿಲ್ಲ. ಬರ, ಬಿಸಿಲಿನಿಂದ ರಾಜ್ಯದ ಸಂಪೂರ್ಣ ಬೆಳೆ ನಾಶವಾಗಿದೆ. ಕರೆಂಟಿಲ್ಲದೆ ನೀರಾವರಿ ಬೆಳೆಯೂ ನಾಶವಾಗಿದೆ. ಇದರ ಬಗ್ಗೆಯೂ ಪರಿಹಾರ ಕೊಡುತ್ತಿಲ್ಲ. ಪ್ರತಿದಿನ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ. ಅದನ್ನು ನಿಲ್ಲಿಸಿಲ್ಲ. ಕರ್ನಾಟಕವು ಪೂರ್ತಿ ಎಟಿಎಂ ಆಗಿದೆ. ತಮಿಳುನಾಡಿಗೆ ಕಾವೇರಿ ನೀರು ಮತ್ತು ಪಂಚರಾಜ್ಯಗಳಿಗೆ ಹಣದ ಹರಿವು ನಿರಂತರವಾಗಿ ಸಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ನೋಟಿನ ಮಳೆ ತನಿಖೆಯಾಗಬೇಕು :ತೆಲಂಗಾಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ರೂಪಾಯಿ ಹಣದ ಮಳೆಯನ್ನು ಬರುವಂತೆ ಮಾಡಿದ್ದಾರೆ. ಸಂಗ್ರಹಿತ ಕೋಟಿಗಿಂತ ಹೆಚ್ಚು ಹಣ ಅವರು ಕುಳಿತಿದ್ದ ಕಡೆ ಕಾಲಿನಡಿ ರಾಶಿರಾಶಿ ರೀತಿ ಸಿಕ್ಕಿದೆ. ಇದರ ಕುರಿತು ಸಂಪೂರ್ಣ ತನಿಖೆ ಆಗಬೇಕು, ಹಣ ಎರಚಿದ್ದಾರೆ. ರಾಶಿರಾಶಿ ಹಣದ ಮೂಲದ ತನಿಖೆ ಆಗಬೇಕು, ಈ ಕುರಿತು ಸಿಎಂ, ಡಿಸಿಎಂ ಸ್ಪಷ್ಟ ಹೇಳಿಕೆ ಕೊಡಬೇಕು ಎಂದು ಆಗ್ರಹಿಸಿದರು. ಈ ಸರ್ಕಾರಕ್ಕೆ ನೈತಿಕತೆ ಇಲ್ಲ. ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕು. ಹಣದ ಕುರಿತು ಹಾರಿಕೆ ಉತ್ತರವನ್ನು ಬಿಜೆಪಿ ಸಹಿಸುವುದಿಲ್ಲ ಎಂದರು.
ಇದನ್ನೂ ಓದಿ :ನೋಟುಗಳ ಸುರಿಮಳೆಯ ವಿಡಿಯೋ ವೈರಲ್: ಸಚಿವ ಶಿವಾನಂದ ಪಾಟೀಲ್ ಹೇಳಿದ್ದೇನು?