ಬೆಂಗಳೂರು:ಅತೃಪ್ತ ಶಾಸಕರ ರಾಜೀನಾಮೆ ಪರ್ವದಿಂದ ಮೈತ್ರಿ ಸರ್ಕಾರಕ್ಕೆ ಕುತ್ತು ಬಂದಿರುವುದರಿಂದ ಶುಕ್ರವಾರ 12 ರಿಂದ ಆರಂಭವಾಗಬೇಕಿದ್ದ ವಿದಾನಮಂಡಳ ಅಧಿವೇಶನ ಮುಂದೂಡುವ ಸಾಧ್ಯತೆಗಳಿವೆ.
ರಾಜಕೀಯ ಪರಿಸ್ಥಿತಿ ಹತೋಟಿಯಲ್ಲಿ ಇಲ್ಲದ್ದರಿಂದ ಅಧಿವೇಶನ ಮುಂದೂಡುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗಿದ್ದು, ದೋಸ್ತಿ ಪಕ್ಷಗಳ ಮುಖಂಡರು ಅಧಿವೇಶನ ನಡೆಸದೇ ಸದ್ಯಕ್ಕೆ ಮುಂದೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಅತೃಪ್ತ ಶಾಸಕರು ಮನಸ್ಸು ಬದಲಾಯಿಸದಿದ್ದರೆ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ. ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಈ ಸಂದರ್ಭದಲ್ಲಿ ಅತೃಪ್ತ ಶಾಸಕರು ಅಧಿವೇಶನಕ್ಕೆ ಗೈರಾದರೆ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ರಾಜಕೀಯ ಪರಿಸ್ಥಿತಿ ತಿಳಿಯಾಗುವ ತನಕ ಅಧಿವೇಶನ ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.
ಅಧಿವೇಶನ ಮುಂದೂಡಿದರೆ ಮೈತ್ರಿ ಪಕ್ಷಗಳಿಗೆ ಅತೃಪ್ತರ ಮನವೊಲಿಸಲು ಮತ್ತಷ್ಟು ಕಾಲ ಸಿಕ್ಕಂತಾಗುತ್ತದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸಿರುವ ಶಾಸಕರ ರಾಜೀನಾಮೆ ವಾಪಸ್ ತಗೆದುಕೊಳ್ಳುವಂತೆ ಮಾಡಿ ಸರ್ಕಾರ ಸುಭದ್ರ ಪಡಿಸಿಕೊಳ್ಳಲು ಯೋಜನೆ ರೂಪಿಸಲಾಗುತ್ತದೆ.
ಅಧಿವೇಶನ ಮುಂದೂಡಬೇಕಾದರೆ ಸಿಎಂ ಕುಮಾರಸ್ವಾಮಿ ಕ್ಯಾಬಿನೆಟ್ ಸಭೆ ಕರೆದು ಅಲ್ಲಿ ತೀರ್ಮಾನ ತಗೆದುಕೊಂಡು ಅಧಿವೇಶನ ದಿನಾಂಕ ಮುಂದೂಡಬೇಕಾಗುತ್ತದೆ.