ಕರ್ನಾಟಕ

karnataka

ETV Bharat / state

ನಮ್ಮ ಸರ್ಕಾರ ಬಂದರೆ ಮುಸ್ಲಿಂ ಸಿಎಂ ಮಾಡುತ್ತೇವೆ ಎಂದು ಕುಮಾರಸ್ವಾಮಿ ಘೋಷಿಸಲಿ: ಜಮೀರ್ ಸವಾಲು

ಕುಮಾರಸ್ವಾಮಿ ಅವರು 113 ಸ್ಥಾನ ಬಂದರೆ ಮುಸ್ಲಿಂರನ್ನು ಸಿಎಂ ಮಾಡುತ್ತೇವೆ ಎಂದಿದ್ದಾರೆ. ಜೆಡಿಎಸ್ 113 ಸ್ಥಾನ ಬರಲು ಸಾಧ್ಯನಾ?. ಎಲ್ಲರೂ ರಾತ್ರಿ ಕನಸು ಕಾಣುತ್ತಿದ್ದರೆ, ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ.

ಶಾಸಕ ಜಮೀರ್ ಅಹಮ್ಮದ್ ಖಾನ್
ಶಾಸಕ ಜಮೀರ್ ಅಹಮ್ಮದ್ ಖಾನ್

By

Published : Dec 5, 2022, 3:44 PM IST

ಬೆಂಗಳೂರು:ಹೆಚ್ ಡಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಬಂದರೂ ಮುಸ್ಲಿಮರನ್ನೇ ‌ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಬಹಿರಂಗ ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು 113 ಸ್ಥಾನ ಬಂದರೆ ಮುಸ್ಲಿಂರನ್ನು ಸಿಎಂರಾಗಿ ಮಾಡುತ್ತೇವೆ ಅಂದಿದ್ದಾರೆ. ಜೆಡಿಎಸ್ 113 ಸ್ಥಾನ ಬರಲು ಸಾಧ್ಯನಾ? ಎಂದು ಪ್ರಶ್ನಿಸಿದರು.

ಎಲ್ಲರೂ ರಾತ್ರಿ ಕನಸು ಕಾಣುತ್ತಿದ್ದರೆ, ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ಅವರು ಯಾವ ವ್ರತ ಮಾಡಿದರೂ ಅದು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಬಂದರೂ ಮುಸ್ಲಿಂ ಸಿಎಂ ಮಾಡುತ್ತೇನೆ ಎಂದು ಘೋಷಣೆ ಮಾಡಲಿ. ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ನೂರು ಸ್ಥಾನ ಗೆಲ್ಲಲ್ಲ ಎಂದು ಟಾಂಗ್ ನೀಡಿದರು.

ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಮಾತನಾಡಿದರು

2018ರಲ್ಲಿ ಎಲ್ಲ ಶಕ್ತಿಗಳು ಒಂದಾಗಿದ್ವು, ಅವಾಗ ಏನಾಯಿತು?. ಮಾಜಿ ಪ್ರಧಾನಿ ದೇವೇಗೌಡರು ಚಾಲೆಂಜ್ ತಗೊಂಡಾಗ ಏನಾಯಿತು?. ಇದೇ ದೇವೇಗೌಡರು ಜೆಡಿಎಸ್​ನಲ್ಲಿ ಮುಸ್ಲಿಂ ಆಗೋಕೆ ಹೊರಟಿದ್ರು. ಕರ್ನಾಟಕ ಮುಸ್ಲಿಂ ಸಾಲದು, ಜಮ್ಮು ಕಾಶ್ಮೀರದಿಂದ ಫಾರೂಕ್ ಅಬ್ದುಲ್ ತಂದು ನಿಲ್ಲಿಸಿ ಅಂದಿದ್ದೆ. ಇಲ್ಲ ಎಂದರೆ ನಿಮ್ಮ ಕುಮಾರಸ್ವಾಮಿ, ರೇವಣ್ಣ ಅವರನ್ನು ನಿಲ್ಲಿಸಿ ಎಂದಿದ್ದೆ. ಹಂಗೂ ನಾನು ಸೋತ್ರೆ ನನ್ನ ತಲೆ ಕತ್ತರಿಸಿ ತಂದು ಕೊಡ್ತೀನಿ ಅಂದಿದ್ದೆ. ಕೊನೆಗೆ ಏನಾಯಿತು, ಆ ಚುನಾವಣೆಯಲ್ಲಿ ಲೀಡ್ ನನಗೆ ಜಾಸ್ತಿ ಆಯ್ತು ಎಂದರು.

ಚಾಮರಾಜಪೇಟೆಯಲ್ಲಿ ಯಾರೇ ಬಂದರೂ ಸರಿ. ಜಮ್ಮೀರ್ ಅಹಮದ್, ಚಾಮರಾಜಪೇಟೆ ಮನೆ ಮಗ. ಚಾಮರಾಜಪೇಟೆ ಜನರು ಮನೆ ಮಗನನ್ನು ಬಿಟ್ಟು ಕೊಡಲ್ಲ. ನನ್ನ ವಿರುದ್ದ ಯಾರೇ ಸ್ಪರ್ಧೆ ಮಾಡಿದರೂ, ಹೆಚ್ಚಿನ ಲೀಡ್​​ನಿಂದ ಗೆಲ್ಲುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರಿಗೆ ಟಾಂಗ್ ಕೊಟ್ಟರು. ಸೈಲೆಂಟ್ ಸುನೀಲ್ ಸ್ಪರ್ಧೆ ಬಿಜೆಪಿ ಪಕ್ಷಕ್ಕೆ ಬಿಟ್ಟ ವಿಚಾರ. ಯಾರಾದರೂ ಬಂದು ನಿಂತುಕೊಳ್ಳಲಿ. ಬಂದವರು ಮೂವತ್ತು ಸಾವಿರ ವೋಟ್​​ ದಾಟಲಿ ಎಂದು ಸವಾಲು ಕೂಡಾ ಹಾಕಿದರು.

ಸಿದ್ದರಾಮಯ್ಯ ಅಳಿಯ:ಸಿದ್ದರಾಮಯ್ಯ ಚಾಮರಾಜ ಪೇಟೆ ಅಳಿಯ. ಮಗನನ್ನು ಇಷ್ಟಪಡುವ ರೀತಿಯಲ್ಲಿ ಅಳಿಯನನ್ನು ಇಷ್ಟ ಪಡುತ್ತಾರೆ ಎಂದು ಇದೇ ವೇಳೆ ತಿಳಿಸಿದರು. ಮಾಧ್ಯಮದಲ್ಲಿ ಸಿದ್ದರಾಮಯ್ಯ ಅವರಿಗೆ ಅಲ್ಲಿ ಸ್ಪರ್ಧೆ ಮಾಡಲು ಆಹ್ವಾನ ಕೊಟ್ಟಿದ್ದೆ. ಚಾಮರಾಜಪೇಟೆಗೆ ನಾನು ಮನೆ ಮಗನಿದ್ದಂತೆ, ಸಿದ್ದರಾಮಯ್ಯ ಅಳಿಯ ಇದ್ದಂತೆ.‌ ಹೆಂಗೆ ಮನೆ‌ಮಗನನ್ನು ಬಿಟ್ಟುಕೊಡಲ್ವೋ ಹಾಗೆ ಅಳಿಯನನ್ನು ಬಿಟ್ಟು ಕೊಡಲ್ಲ ಎಂದು ಸಿದ್ದರಾಮಯ್ಯ ಸ್ಪರ್ದೆಗೆ ಆಹ್ವಾನವನ್ನು ಸಮರ್ಥಿಸಿಕೊಂಡರು.

ಬಿಜೆಪಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ.‌ ಅವರಿಗೆ ಕಾಣುವುದು ಸಿದ್ದರಾಮಯ್ಯ. ಅಮಿತ್ ಶಾ, ಮೋದಿಗೆ ಎಲ್ಲರಿಗೆ ಸಿದ್ದರಾಮಯ್ಯ ಮೇಲೆ ಕಣ್ಣು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಜನಪ್ರಿಯ ವ್ಯಕ್ತಿ ಎಂದರು.

ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಇಲ್ಲ: ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಇಲ್ಲ. ಅಂದು ಏನು ಹೇಳಿದ್ದೇನೋ ಇಂದೂ ಅದೇ ಹೇಳಿಕೆಗೆ ನಾನು ಬದ್ಧ. ಆದರೆ ನಮ್ಮದು ಹೈಕಮಾಂಡ್ ಇರುವ ಪಕ್ಷ. ಹೈಕಮಾಂಡ್ ಹಾಕಿದ ಗೆರೆ ದಾಟಲ್ಲ ಎಂದು ಇದೇ ವೇಳೆ ಜಮೀರ್​ ಅಹಮದ್​ ಖಾನ್​ ಸ್ಪಷ್ಟಪಡಿಸಿದರು.

ಓದಿ:ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಶೀಘ್ರ ಜಾರಿ: ಸಚಿವ ವಿ.ಸೋಮಣ್ಣ

ABOUT THE AUTHOR

...view details