ಬೆಂಗಳೂರು:ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಕಚ್ಚಾಟ ಬಿಜೆಪಿಗೆ 22ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲಲು ಸಹಕಾರಿಯಾಗಲಿದೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಬೆಂಗಳೂರು ಮತದಾರರು ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಯುವ ಮತದಾರರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗಿಗೆ ಸ್ಪಂದಿಸುತ್ತಿದ್ದಾರೆ. ಮೋದಿ ಅವರಿಂದ ದೇಶದ ಭವಿಷ್ಯ ಭದ್ರ ಆಗುತ್ತದೆ ಎಂಬ ಭಾವನೆ ಜನರಲ್ಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಪ್ರಮಾಣ ವಚನ ವೇಳೆ ಸಾಕ್ಷಿಯಾಗಿದ್ದ ಮಹಾಮೈತ್ರಿ ಹರಿದು ಹೋದ ಬಟ್ಟೆ ತರ ಆಗಿದೆ. ಬೆಂಗಳೂರು ಉತ್ತರಕ್ಕೆ, ದಕ್ಷಿಣ ಕ್ಷೇತ್ರಗಳಿಗೆ ದೋಸ್ತಿಗಳಿಗೆ ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಎಲ್ಲರೂ ನಾನು ಒಲ್ಲೆ, ನಾನು ಒಲ್ಲೆ ಎನ್ನುತ್ತಿದ್ದಾರೆ. ಅವನನ್ನು ಬಿಟ್ಟು, ಅವನನ್ನು ಬಿಟ್ಟು ಅವನು ಯಾರೂ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಬಿಜೆಪಿ ವಿರುದ್ಧ ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರವಾದ ಅಲೆ ಇದೆ. ನಾನು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಓಡಾಡಿದಾಗ ಇದರ ಅರಿವಾಗಿದೆ. ಆಡಳಿತ ವಿರೋಧಿ ಅಲೆ ಇರುವುದು ದೋಸ್ತಿ ಸರ್ಕಾರ ಹಾಗೂ ಮಹಾಘಟಬಂಧನದ ಪಾಲುದಾರರ ವಿರುದ್ಧ ಎಂದು ಕಿಡಿಕಾರಿದರು.
ಕಾಂಗ್ರೆಸ್ ನದ್ದು ಹತಾಶೆ ಮನೋಭಾವ. ವಿನಾಕಾರಣ ಆಧಾರರಹಿತ ಆರೋಪ ಮಾಡುತ್ತಾರೆ. ಪಾಕ್ ಮೇಲೆ ವಾಯು ದಾಳಿ ಮಾಡಿದಾಗಲೂ ಅವರು ಸುಳ್ಳು ಆರೋಪಗಳನ್ನು ಮಾಡಿದರು. ಅದಾದ ಬಳಿಕ ಈಗ ಡೈರಿ ವಿಚಾರವನ್ನು ಹಿಡಿದುಕೊಂಡಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಜನಸಾಮಾನ್ಯರು ಇದ್ಯಾವ ಆರೋಪಗಳಿಂದಲೂ ಬಾಧಿತರಾಗಿಲ್ಲ. ಅವರಿಗೆ ಮೋದಿ ಯಾರು ಎಂದು ಗೊತ್ತು. ಮೋದಿ ಹಠಾವೋ ಎನ್ನುವ ಶಕ್ತಿಗಿಂತ ಮೋದಿ ಮತ್ತೊಮ್ಮೆ ಎಂಬುವರ ಶಕ್ತಿ ಹೆಚ್ಚಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು ೨೨ ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಈ ಬಗ್ಗೆ ರಾಜ್ಯಾಧ್ಯಕ್ಷರೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ, ಮೈತ್ರಿ ಪಕ್ಷಗಳು ನಮಗೆ ಬಹಳ ಸಹಾಯ ಮಾಡುತ್ತಿದೆ. ಹೀಗಾಗಿ ನಾವು ಈ ಬಾರಿ ೨೨ಕ್ಕೂ ಹೆಚ್ಚು ಸೀಟು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.