ಕರ್ನಾಟಕ

karnataka

ETV Bharat / state

ಮೈತ್ರಿ ಕುರಿತು ಜೆಡಿಎಸ್​ ದ್ವಂದ್ವ ನಿಲುವು ಬೇಡ; ಶಾಸಕ ಶಿವಲಿಂಗೇಗೌಡ ಮನವಿ

ಜೆಡಿಎಸ್​ ಪಕ್ಷದಲ್ಲಿ ಅನೇಕ ದ್ವಂದ್ವಗಳಿವೆ, ಅವುಗಳನ್ನು ಸರಿಪಡಿಸಿ ಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಮನವಿ ಮಾಡಿದ್ದಾರೆ.

ವರಿಷ್ಠರಿಗೆ ಮನವಿ ಮಾಡಿದ ಶಾಸಕ ಶಿವಲಿಂಗೇಗೌಡ
ವರಿಷ್ಠರಿಗೆ ಮನವಿ ಮಾಡಿದ ಶಾಸಕ ಶಿವಲಿಂಗೇಗೌಡ

By

Published : Jan 7, 2021, 4:15 PM IST

ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಸಾಫ್ಟ್ ಕಾರ್ನರ್ ಹೊಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಯಾವುದಾದರೂ ಒಂದು ನಿಲುವು ಇರಲಿ. ನಮ್ಮಲ್ಲಿ ದ್ವಂದ್ವ ನಿಲುವು ಬೇಡವೇ ಬೇಡ ಎಂದು ಶಾಸಕ ಶಿವಲಿಂಗೇಗೌಡ ಅವರು ವರಿಷ್ಠರ ಮುಂದೆಯೇ ಸ್ಪಷ್ಟ ನಿಲುವು ತಾಳುವಂತೆ ಒತ್ತಾಯಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿರುವ ಸಂಘಟನಾ ಸಭೆಯಲ್ಲಿ ಇಂದು ಮಾತನಾಡಿದ ಅವರು, ನಾವು ಬಿಜೆಪಿ ಜೊತೆ ಸಖ್ಯ ಬೆಳೆಸುತ್ತೇವೆ ಎಂದು ಯಾಕೆ ಹೇಳಬೇಕಾಗಿತ್ತು. ಬಸವರಾಜ್ ಹೊರಟ್ಟಿ ಅವರಿಗೆ ಯಾರು ಸ್ವಾತಂತ್ರ್ಯ ಕೊಟ್ಟವರು? ಯಾಕೆ ಮೈತ್ರಿ ಅಂತಾ ಹೇಳಬೇಕಾಯ್ತು? ಎಂದು ಹೊರಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಹೊರಟ್ಟಿ ಸಭಾಪತಿ ಆಗದೇ ಇದ್ದರೆ ಯಾವ ದೇಶ ಮುಳುಗುತ್ತದೆ. ಯಾರದ್ದೋ ಸ್ವಾರ್ಥಕ್ಕಾಗಿ‌ ಪಕ್ಷವನ್ನು ಬಲಿ ಕೊಡಬಾರದು. ಬಿಜೆಪಿ ಜೊತೆ ಸಂಬಂಧ ಬೆಳೆಸಬಹುದು ಅಂತಾ ಹೊರಟ್ಟಿ ಯಾಕೆ ಹೇಳಬೇಕಿತ್ತು ಎಂದು ಗರಂ ಆದರು.

ನಾವು ಐದು ವರ್ಷ ಸಿಎಂ ಒಪ್ಪಿಕೊಳ್ಳಬಾರದಾಗಿತ್ತು, ಎರಡೂವರೆ ವರ್ಷಕ್ಕೆ ಒಪ್ಪಿಕೊಳ್ಳಬೇಕಿತ್ತು ಅನಿಸುತ್ತದೆ. ಕುಮಾರಸ್ವಾಮಿ ಅವರ ಮೇಲೆ ಇಲ್ಲಸಲ್ಲದ ಅರೋಪ ಹೊರಿಸಿದರು. ಅದೇ ಕಾರಣಕ್ಕೆ ಹದಿನಾಲ್ಕು ತಿಂಗಳು ಮಾತ್ರ ಸಿಎಂ ಆಗಿ ಇರಬೇಕಾಯ್ತು ಎಂದರು.

ಅರಸೀಕೆರೆ ಕ್ಷೇತ್ರದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. 35ರಲ್ಲಿ 33 ಗ್ರಾಮ ಪಂಚಾಯಿತಿ ಗೆದ್ದಿದ್ದೇವೆ. ನಮ್ಮ ಸಿದ್ದಾಂತದಲ್ಲೇ ಸಾಗಬೇಕು ಎಂದು ಹೇಳಿದರು.

ABOUT THE AUTHOR

...view details