ಬೆಂಗಳೂರು: ಹೊಸಕೋಟೆ ತಾಲೂಕು ಅಭಿವೃದ್ಧಿಯಲ್ಲಿ ತಾರತಮ್ಯವಾಗುತ್ತಿದೆ. ಆದರೆ, ಸಚಿವ ಎಂಟಿಬಿ ನಾಗರಾಜ್ ಅವರು ತಾಲೂಕಿಗೆ ಬಂದಿರುವ ಹಣ ತಡೆಹಿಡಿದಿದ್ದಾರೆ ಎಂದು ಆರೋಪಿಸಿ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಇಂದು ಸಂಜೆ ಧರಣಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ ಬಿಡುಗಡೆಯಾಗಿದ್ದ ಸುಮಾರು 10 ಕೋಟಿ ರೂ. ಹಣವನ್ನು ಸಚಿವರ ಕುತಂತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡೆ ಹಿಡಿದಿರುವುದನ್ನು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಏಳೆಂಟು ತಿಂಗಳಿಂದ ಕಾನೂನಾತ್ಮಕವಾಗಿ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಆದರೆ, ಸಚಿವರು ತಾಲೂಕಿಗೆ ಬಂದಿರುವ ಹಣ ತಡೆಹಿಡಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸಕೋಟೆ ತಾಲೂಕಿಗೆ 20 ಕೋಟಿ ರೂ. ನೀಡಿದ್ರು. 10 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಅನುಮೋದನೆ ನೀಡಿದ್ರು. ಅಭಿವೃದ್ಧಿ ಶರತ್ ಬಚ್ಚೇಗೌಡ ಮಾಡಿದ್ರೆ ನನಗೆ ಸಮಸ್ಯೆ ಆಗುತ್ತದೆ ಎಂದು ಮುಂದಿನ ಆದೇಶದವರೆಗೂ ತಡೆ ಹಿಡಿಯಿರಿ ಎಂದು ಆದೇಶ ಮಾಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳೇ ಖುದ್ದು ಅನುದಾನ ನೀಡುವುದಾಗಿ ಸಹಿ ಹಾಕಿದ್ದಾರೆ: ಫೆ.22ರಂದು ಸರ್ಕಾರದ ಆದೇಶದ ಮೂಲಕ ಜಿಲ್ಲಾ ಪಂಚಾಯಿತಿಗೆ ಹೋಗಿ ಸಿಇಒ ಕಡೆ ಸಹಿ ಹಾಕಿ ಕಳಿಸಿದೆ.
ಆದರೆ, ಸಿಎಂ ಕಚೇರಿಯಿಂದ ತಡೆ ಹಿಡಿಯಲಾಗಿದೆ. ಬಜೆಟ್ ಮಂಡನೆ ಆಗಬೇಕು ಅಂದರೆ ನಾವೆಲ್ಲಾ ಸಿಎಂಗೆ ಬೆಂಬಲ ನೀಡಿದ್ದೇವೆ. ಇದೇನು ದೊಡ್ಡ ಅನುದಾನ ಅಲ್ಲ. 10 ಕೋಟಿ ರೂ.ನಲ್ಲಿ ಬಾರೀ ಅಭಿವೃದ್ಧಿ ಆಗಲ್ಲ. ಆದರೆ ಅದನ್ನ ತಡೆ ಹಿಡಿದಿದ್ದಾರೆ. ನಾವು, ಅವರು ಇಬ್ಬರೂ ಅಭಿವೃದ್ಧಿ ಮಾಡೋಣ. ಮತ ಹಾಕುವ ಜನರು ತೀರ್ಮಾನ ಮಾಡ್ತಾರೆ ಎಂದರು.
ಅಹೋರಾತ್ರಿ ಹೋರಾಟ: ಸಿಎಂ ಕೊಟ್ಟ ಮಾತಿನ ಮೇಲೆ ನಂಬಿಕೆ ಇಲ್ಲದಂತಾಗಿದೆ, ಹೊಸಕೋಟೆ ಜನ ಸ್ವತಂತ್ರ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಅದೇ ಕಾರಣಕ್ಕೆ ಅನುದಾನ ತಾರತಮ್ಯ ಮಾಡಿದ್ದಾರೆ. ಈ ಹತ್ತು ಕೋಟಿ ರೂ. ನಿಂದ ನನ್ನ ರಾಜಕೀಯ ಭವಿಷ್ಯ ಬದಲಾಗಲ್ಲ. ವಿಪಕ್ಷದಲ್ಲಿ ಇದ್ದುಕೊಂಡೇ ಹೋರಾಟ ಮಾಡುತ್ತೇನೆ ಅಹೋರಾತ್ರಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.