ಕರ್ನಾಟಕ

karnataka

ETV Bharat / state

ಕೇಂದ್ರದಿಂದ ಶೇ.50ರಷ್ಟು ತೆರಿಗೆ ಪಾಲು ಸಿಗುತ್ತಿಲ್ಲ: ಕೃಷ್ಣಬೈರೇಗೌಡ

ರಾಜ್ಯದಿಂದ ತೆರಿಗೆ ಪಾವತಿ ಮಾಡಿದ್ದರೂ ಕೇಂದ್ರ ಸರ್ಕಾರ, ರಾಜ್ಯ ಜಿಎಸ್​ಟಿ ಪಾಲನ್ನು ಕೊಡದೇ ಇರುವುದರಿಂದ ಅನವಶ್ಯಕವಾಗಿ ರಾಜ್ಯ ಸಾಲ ಮಾಡಿದೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ತಿಳಸಿದರು.

MLA Krishna Byregowda
ಕೃಷ್ಣಬೈರೇಗೌಡ

By

Published : Sep 25, 2020, 6:25 PM IST

ಬೆಂಗಳೂರು:ಸಾಲ ಮರು ಪಾವತಿ ಹಾಗೂ ಸಂಬಳದ ವೆಚ್ಚವನ್ನು ಶೇ.40ಕ್ಕೆ ಸೀಮಿತಗೊಳಿಸುವ ಭರವಸೆ ನೀಡಿ, ಮುಂದಾಗುವ ಅನಾಹುತದಿಂದ ರಾಜ್ಯದ ಜನರನ್ನು ರಕ್ಷಣೆ ಮಾಡಿ ಎಂದು ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಇಂದು ಸರ್ಕಾರಕ್ಕೆ ಸಲಹೆ ನೀಡಿದರು.

2020ನೇ ಸಾಲಿನ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದಿಂದ ತೆರಿಗೆ ಪಾವತಿ ಮಾಡಿದ್ದರೂ ಕೇಂದ್ರ ಸರ್ಕಾರ ರಾಜ್ಯ ಜಿಎಸ್​ಟಿ ಪಾಲನ್ನು ಕೊಡದೇ ಇರುವುದರಿಂದ ಅನವಶ್ಯಕವಾಗಿ ರಾಜ್ಯ ಸಾಲ ಮಾಡಿದೆ ಎಂದು ಹೇಳಿದರು.

ಒಂದು ರೂ. ತೆರಿಗೆ ಪಾವತಿಸಿದರೆ ನಮಗೆ 47 ಪೈಸೆ ಮಾತ್ರ ಕೊಡಲಾಗುತ್ತದೆ. ಆದರೆ, ಬೇರೆ ರಾಜ್ಯಕ್ಕೆ 1ರೂ. 47 ಪೈಸೆ ತೆರಿಗೆ ಪಾಲು ಹೋಗುತ್ತದೆ. ಕೇಂದ್ರದಿಂದ ಶೇ.50ರಷ್ಟು ತೆರಿಗೆ ಪಾಲು ಸಿಗುತ್ತಿಲ್ಲ. ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಎಸ್​ಟಿಯಿಂದ ಕನಿಷ್ಠ 14 ಸಾವಿರ ಕೋಟಿ ರೂ. ಕೊರತೆಯಾಗಲಿದ್ದು, ಇದನ್ನು ಸರಿದೂಗಿಸಲು ಸಾಲ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ 11,300 ಕೋಟಿ ರೂ. ಮಾತ್ರ ಪರಿಹಾರ ಭರಿಸಲು ಸಮ್ಮತಿಸಿದೆ. 2019-20 ರಲ್ಲಿ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು 39 ಸಾವಿರ ಕೋಟಿ ರೂ. ಬದಲಿಗೆ 30 ಸಾವಿರ ಕೋಟಿ ರೂ. ಬಂದಿದೆ. ಈ ವರ್ಷ 28ಸಾವಿರ ಕೋಟಿಗೆ ಇಳಿಕೆಯಾಗಲಿದ್ದು, 12 ಸಾವಿರ ಕೋಟಿ ರೂ. ಕಡಿಮೆಯಾಗಲಿದೆ. ಇದನ್ನು ಸರಿದೂಗಿಸಲು ಸಾಲ ಮಾಡಬೇಕಾಗಿದೆ ಎಂದರು.

ಅನಗತ್ಯ ವೆಚ್ಚಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಮೂರು ವರ್ಷದಿಂದ ರಾಜ್ಯದಲ್ಲಿ ಪ್ರವಾಹ, ಅದಕ್ಕೂ ಮುನ್ನ ಆರು ವರ್ಷ ಬರವಿತ್ತು. ತೆರಿಗೆ ಪಾವತಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ ನಮಗೆ ತೆರಿಗೆ ಪಾಲನ್ನು ನೀಡಲಾಗುತ್ತಿಲ್ಲ ಎಂದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು.

ABOUT THE AUTHOR

...view details