ಕರ್ನಾಟಕ

karnataka

ETV Bharat / state

ದೊಡ್ಡಗೌಡ್ರು ಅಸ್ತು ಅಂದ್ರೆ ಜೆಡಿಎಸ್​ಗೆ ಇವರೇ ರಾಜ್ಯಾಧ್ಯಕ್ಷ!

ಹೆಚ್. ವಿಶ್ವನಾಥ್ ಅವರ ರಾಜೀನಾಮೆಯಿಂದ ಖಾಲಿಯಾಗಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಯಾವೆಲ್ಲ ನಾಯಕರ ಹೆಸರು ಅಂತಿಮ ಅನ್ನೋದರ ಬಗ್ಗೆ ಒಂದೆರಡು ದಿನಗಳ ಒಳಗಾಗಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಕೃಪೆ: ಟ್ವಿಟರ್​

By

Published : Jun 28, 2019, 5:42 PM IST

Updated : Jun 28, 2019, 6:30 PM IST

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ದಲಿತ ಸಮುದಾಯದವರನ್ನು ತರಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಚಿಂತನೆ ನಡೆಸಿದ್ದು, ಒಂದೆರಡು ದಿನಗಳ ಒಳಗಾಗಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

ವಿಶ್ವನಾಥ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಆದರೆ, ಅದಕ್ಕೆ ಅವರು ಒಪ್ಪದ ಕಾರಣ ಆ ಸ್ಥಾನಕ್ಕೆ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರ ಹೆಸರು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಸಚಿವರಾಗಿದ್ದ ಹೆಚ್.ಕೆ.ಕುಮಾರಸ್ವಾಮಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ದಲಿತ ವರ್ಗಕ್ಕೆ ಸಚಿವ ಸ್ಥಾನ ನೀಡಿಲ್ಲವೆಂಬ ಆರೋಪಗಳು ಕೇಳಿಬಂದಿದ್ದವು. ಹಾಗಾಗಿ, ದಲಿತ ಸಮುದಾಯವನ್ನು ಸರಿದೂಗಿಸುವ ಉದ್ದೇಶದಿಂದ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲು ವರಿಷ್ಠರು ಮುಂದಾಗಿದ್ದಾರೆ.

ಪ್ರಮುಖವಾಗಿ ಮಧು ಬಂಗಾರಪ್ಪ ಹಾಗೂ ಹೆಚ್​.ಕೆ.ಕುಮಾರಸ್ವಾಮಿ ಹೆಸರು ಪರಿಶೀಲನೆಯಲ್ಲಿದೆ. ಈಗಾಗಲೇ ಮಧು ಬಂಗಾರಪ್ಪ ಅವರು ರಾಜ್ಯ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಹೆಚ್.ವಿಶ್ವನಾಥ್ ಸೇರಿ ಬಹುತೇಕ ನಾಯಕರು ಒಲವು ಹೊಂದಿದ್ದಾರೆ. ಆದರೆ, ದಲಿತ ಸಮುದಾಯದವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ದೇವೇಗೌಡರು ಚಿಂತನೆ ನಡೆಸುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಅವಕಾಶ ಕೊಡುವ ಅದರಲ್ಲೂ ಬಿ.ಎಂ.ಫರೂಕ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.

ಮಧು ಬಂಗಾರಪ್ಪ, ಹೆಚ್​.ಕೆ.ಕುಮಾರಸ್ವಾಮಿ, ಬಿ.ಎಂ.ಫರೂಕ್ ಕುರಿತು ಗೌಡರು ಪಕ್ಷದ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಲಿಂಗಾಯತ ಸಮುದಾಯದ ಲೀಲಾದೇವಿ ಆರ್. ಪ್ರಸಾದ್ ಅವರನ್ನು ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಿಸಲಾಗಿದ್ದು, ದಲಿತ ವರ್ಗದವರಿಗೆ ರಾಜ್ಯಾಧ್ಯಕ್ಷ ಸ್ಥಾನ, ಹಿಂದುಳಿದ ವರ್ಗದವರಿಗೆ ಯುವ ಘಟಕದ ಅಧ್ಯಕ್ಷ ಸ್ಥಾನ, ಮುಸ್ಲಿಂ ಹಾಗೂ ಲಿಂಗಾಯತರಿಗೆ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆ, ಕುರುಬ, ಯಾದವ, ಬಲಿಜ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಕಾರ್ಯಾಧ್ಯಕ್ಷರ ಹುದ್ದೆ ನೀಡುವುದು ದೇವೇಗೌಡರ ಲೆಕ್ಕಾಚಾರವಾಗಿದೆ.

ಬ್ರಾಹ್ಮಣ ಸಮುದಾಯದ ವೈ.ಎಸ್.ವಿ.ದತ್ತಾ ಅವರಿಗೆ ಈಗಾಗಲೇ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿ, ಎಲ್ಲ ವರ್ಗದವರಿಗೂ ಪಕ್ಷದಲ್ಲಿ ಅಧಿಕಾರ ಕಲ್ಪಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಪಾದಯಾತ್ರೆಗೆ ಸಿದ್ಧತೆ:ವಿಚಾರ-ವಿಕಾಸ-ವಿಶ್ವಾಸ ಎಂಬ ತ್ರಿವಿಧ ಚಿಂತನೆಯೊಂದಿಗೆ ಎರಡು ಹಂತಗಳಲ್ಲಿ ರಾಜ್ಯದ ಜನಮನ ಮುಟ್ಟಲು ಪಾದಯಾತ್ರೆ ಕಾರ್ಯಕ್ರಮವನ್ನು ರೂಪಿಸುವ ಉದ್ದೇಶದಿಂದ ಜೆಡಿಎಸ್​ನ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತಾ ನಾಳೆ ಯುವ ಕಾರ್ಯಕರ್ತರ ಸಭೆ ಕರೆದಿದ್ದಾರೆ.

Last Updated : Jun 28, 2019, 6:30 PM IST

ABOUT THE AUTHOR

...view details