ಬೆಂಗಳೂರು:ಮಹಿಳೆಯ ಮೇಲೆ ದರ್ಪ ತೋರಿದ್ದು ಮಾತ್ರವಲ್ಲದೆ ಮಾಧ್ಯಮಗಳ ಮುಂದೆ ನಾನೇನು ಅವಳನ್ನ ರೇಪ್ ಮಾಡಿದ್ದೀನಾ ಎಂದು ಹೇಳಿ ಶಾಸಕ ಅರವಿಂದ ಲಿಂಬಾವಳಿ ಉದ್ಧಟತನ ತೋರಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾನೇನು ರೇಪ್ ಮಾಡಿದ್ನಾ ಅಂತಾ ಹೇಳಿದ್ದಾರೆ. ರೇಪ್ ಅನ್ನೋದು ಬರೀ ನಾಲ್ಕು ಅಕ್ಷರಗಳ ಪದವಲ್ಲ. ಅದನ್ನು ಬಳಸುವುದರಿಂದ ತಂದೆ, ತಾಯಿ, ಅಣ್ಣ ತಮ್ಮಂದಿರಿಗೆ ನೋವಾಗುತ್ತದೆ. ಆ ಪದವನ್ನು ಅಷ್ಟು ಸುಲಭವಾಗಿ ಹೇಗೆ ಬಳಸುತ್ತೀರಿ? ಅವರಿಗೆ ನಾಚಿಕೆ ಆಗಲ್ವಾ ಎಂದು ಪುಷ್ಪಾ ಅಮರನಾಥ್ ತರಾಟೆಗೆ ತೆಗೆದುಕೊಂಡಿದ್ದಾರೆ
ಇಂದು ಅರವಿಂದ್ ಲಿಂಬಾವಳಿಯಿಂದ ಅಪಮಾನಕ್ಕೆ ಕೊಳಗಾದ ಕಾಂಗ್ರೆಸ್ ನಾಯಕಿ ರೂತ್ ಸಗಾಯ್ ಮೇರಿ ಮಾತನಾಡಿ, ನಮ್ಮ ಕಟ್ಟಡದ ಗೋಡೆಯನ್ನು ಒಡೆದು ಹಾಕುತ್ತಿದ್ದರು. ಅದನ್ನು ನೋಡಿ ಒಂದು ನೋಟಿಸ್ ಕೊಡಬೇಕಾಗಿತ್ತಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಕೇಳಿದೆ. ಆಗ ಅವರು ಶಾಸಕರಿಂದ ಸೂಚನೆ ಬಂದಿದೆ ಅಂತಾ ಹೇಳಿದ್ರು. ನಮ್ಮ ಪ್ರಕಾರ ನಾವು ಅತಿಕ್ರಮಣ ಮಾಡಿಲ್ಲ. ನಮ್ಮ ದಾಖಲೇ ಪ್ರಕಾರ ಕಟ್ಟಡ ನಿರ್ಮಿಸಿದ್ದೇವೆ. ನಿಮ್ಮಲ್ಲಿ ದಾಖಲೆ ಇದ್ದರೆ ಕೊಡಿ, ಒತ್ತುವರಿ ಮಾಡಿದ್ದರೆ ತೆರವು ಮಾಡ್ತೇನೆ ಅಂತಾ ಹೇಳಿದ್ದೇನೆ. ಆದರೆ ಏಕಾಏಕಿ ನನ್ನಿಂದ ದಾಖಲೆಗಳನ್ನು ಕಿತ್ತುಕೊಳ್ಳಲು ಬಂದರು. ಜೊತೆಗೆ ಹೊಡಿರೋ ಅವಳಿಗೆ ಅಂತಾ ಜೊತೆಗಿದ್ದವರಿಗೆ ಸೂಚಿಸಿದರು ಎಂದು ತಿಳಿಸಿದರು.
ನಮ್ಮ ಮನೆಗೆ ಗೋಡೆ ಒತ್ತುವರಿ ಅಂತ ತೆರವು ಮಾಡಿದ್ರು. ನಮ್ಮ ದಾಖಲೆಗಳು ಸರಿ ಇದೆ. ಆದ್ರೆ ಡೆಮಾಲಿಷ್ ಮಾಡುವ ಮುಂಚೆ ಒಂದು ನೋಟಿಸ್ ಕೊಟ್ಟಿಲ್ಲ. ಇದು ಸರ್ಕಾರಿ ಜಮೀನು ಶಾಸಕರು ತೆರವು ಮಾಡೋಕೆ ಹೇಳಿದ್ರು ಅಂತಾ ಡೆಮಾಲಿಷ್ ಮಾಡಿದ್ರು. ನಾನು ದಾಖಲೆ ತೋರಿಸೋಕೆ ಹೋದಾಗ ದಾಖಲೆ ಕಿತ್ತುಕೊಂಡ್ರು. ಬಾಯಿಗೆ ಬಂದಂತೆ ನನಗೆ ಬೈದರು. ನಾನು ಮಹಿಳೆ ಸರ್ ಅಂತ ಅಂದೆ. ಏನ್ ಮಹಿಳೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಅಂತ ಬೈದ್ರು. ನನ್ನ ಮೇಲೆ ಹಲ್ಲೆ ಮಾಡೋಕೆ ಬಂದ್ರು. ಲೇಡಿ ಪೊಲೀಸ್ ಕರೆಸಿ ಪೊಲೀಸ್ ಸ್ಟೇಷನ್ಗೆ ಕರ್ಕೊಂಡು ಹೋದ್ರು. ಆದ್ರೆ ಪೊಲೀಸರು ಕೂಡ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲ ಎಂದರು.