ಬೆಂಗಳೂರು:ಕೊರೊನಾದ ಹಿನ್ನೆಲೆಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿರುವ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಪ್ರಯಾಣಿಕರು ಮಾಸ್ಕ್ ಇಲ್ಲದೆ ಪ್ರಯಾಣಿಸಿದರು. ಸುಮಾರು 6 ಸಾವಿರ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದು, ಇವುಗಳಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ನಿತ್ಯ ಸಂಚಾರ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದರೂ ಕೆಲ ದೇಶಗಳಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಶನಿವಾರದಿಂದ ಮಾಸ್ಕ್ ಕಡ್ಡಾಯ ನಿಯಮ ಜಾರಿಗೆ ತಂದಿತ್ತು. ಸಿಬ್ಬಂದಿ, ಬಸ್ ಚಾಲಕರು, ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದು, ಆದರೆ ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಾಸ್ಕ್ ಧರಿಸುತ್ತಿರುವುದು ಕಂಡು ಬರುತ್ತಿದೆ.
ಮಾಸ್ಕ್ ಧರಿಸಿರದ ಪ್ರಯಾಣಿಕರಿಗೆ ನಿಯಮದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಬಸ್‌ಗಳ ನಿರ್ವಾಹಕರು, ಚಾಲಕರು ಸೋಂಕು ಹರಡದಂತೆ ಮುಂಜಾಗ್ರತಾ ದೃಷ್ಟಿಯಿಂದ ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಇದ್ದು ನಿರ್ಲಕ್ಷ್ಯ ತೋರಿದ ಪ್ರಯಾಣಿಕರಿಗೆ ಮಾಸ್ಕ್ ಧರಿಸದಿದ್ದರೆ ಟಿಕೆಟ್ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗುತ್ತಿದೆ. ಕೆಲ ಬಸ್‌ಗಳಲ್ಲಿ ಪ್ರಯಾಣಿಕರು ಬೆಂಗಳೂರಿನಲ್ಲಿ ಸೋಂಕು ಹೆಚ್ಚಿಲ್ಲದಿದ್ದರೂ ಅನಗತ್ಯ ನಿಯಮವೇಕೆ ಎಂದು ಬಸ್ ನಿರ್ವಾಹಕರನ್ನು ಪ್ರಶ್ನಿಸುತ್ತಿದ್ದಾರೆ. ಬಿಎಂಟಿಸಿ ವಿರುದ್ಧವು ಕಿಡಿಕಾರುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ನಿರ್ವಾಹಕರ ನಡುವೆ ಜಟಾಪಟಿ:ಕೆಲ ಬಸ್‌ಗಳಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಮಾಸ್ಕ್ ಕಡ್ಡಾಯ ನಿಯಮದ ಕುರಿತುವಾದ ವಿವಾದಗಳು ನಡೆದಿವೆ. ಮಾಸ್ಕ್ ಹಾಕಿಕೊಳ್ಳದಿದ್ದರೆ ಟಿಕೆಟ್ ನೀಡಬಾರದು ಅಥವಾ ದಂಡ ವಿಧಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸಬೇಕು ಎಂದು ಚಿಂತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸುಶಾಸನ ದಿನ: 10 ಸಾವಿರ ಯುವ ಜನರಿಗೆ ಉದ್ಯೋಗಪತ್ರ ವಿತರಿಸಿದ ಸಿಎಂ ಬೊಮ್ಮಾಯಿ