ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಲೆಮರೆಸಿಕೊಂಡಿದ್ದ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ ಬಂಧಿತ ಆರೋಪಿ.
ಏನಿದು ಪ್ರಕರಣ.. 2000ನೇ ಇಸವಿಯಲ್ಲಿ ಹೊಸೂರು ರಸ್ತೆಯಲ್ಲಿ ಲಾರಿ ಚಾಲಕನನ್ನು ಕೊಲೆಗೈದು ದರೋಡೆ ಮಾಡಿದ್ದ ಆರೋಪದಡಿ ಸುಹೇಲ್, ಶಂಕರ್, ಸಲೀಂ, ಚಾಂದ್ ಪಾಶಾ ಹಾಗೂ ವೇಣುಗೋಪಾಲ್ ಎಂಬ ಐವರು ಆರೋಪಿಗಳನ್ನ ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದರು. 2004ರಲ್ಲಿ ಸುಹೇಲ್, ಶಂಕರ್ ಹಾಗೂ ಸಲೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2007ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ತೆರಳಿದ್ದ ಸುಹೇಲ್ ವಾಪಸ್ ಮರಳದೇ ತಲೆಮರೆಸಿಕೊಂಡಿದ್ದ. ಸುಹೇಲ್ ಎಂಬ ಹೆಸರನ್ನು ಮಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಆಯುರ್ವೇದ ಔಷಧ ಮಾರಾಟಗಾರನಾಗಿ ಈತ ತಲೆಮರೆಸಿಕೊಂಡು, ಜೀವನ ನಡೆಸುತ್ತಿದ್ದ.
ಗುರುತು ಮರೆಮಾಚಿ ಜೀವನ.. 2015ರಲ್ಲಿ ಸುಹೇಲ್ ನಂತೆಯೇ ಪೆರೋಲ್ ಪಡೆದು ಜೈಲಿನಿಂದ ಹೊರಬಂದಿದ್ದ ಮತ್ತೋರ್ವ ಆರೋಪಿ ಶಂಕರ್ 2017ರಲ್ಲಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದ. 'ಶಂಕರ್ ಹಣದ ಅಗತ್ಯವಿದ್ದಾಗ ಆಗಾಗ ಬೆಳ್ತಂಗಡಿಯ ಸಾಗರ್ ಎಂಟರ್ಪ್ರೈಸಸ್ ಗೆ ಹೋಗಿ ಬರುತ್ತಿದ್ದ' ಎಂದು ಶಂಕರ್ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದ.
ಇತ್ತೀಚಿಗೆ ಮಡಿವಾಳ ಪೊಲೀಸ್ ಠಾಣಾ ಪ್ರಕರಣಗಳಲ್ಲಿ ಪೆರೋಲ್ ಪಡೆದು ನಾಪತ್ತೆಯಾದ ಆರೋಪಿಗಳ ಕುರಿತು ತನಿಖೆ ಕೈಗೆತ್ತಿಕೊಂಡಿದ್ದ ಮಡಿವಾಳ ಠಾಣಾ ಇನ್ಸ್ಪೆಕ್ಟರ್ ಪೌಲ್ ಪ್ರಿಯಕುಮಾರ್, ಸಬ್ ಇನ್ಸ್ಪೆಕ್ಟರ್ ಕಿಶೋರ್ ಬಿ.ಟಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಮತ್ತೊಮ್ಮೆ ಸೂಕ್ಷ್ಮವಾಗಿ ತನಿಖೆ ಆರಂಭಿಸಿ, ಬೆಳ್ತಂಗಡಿಗೆ ತೆರಳಿ ಪರಿಶೀಲಿಸಿದಾಗ ಆರೋಪಿ ಆಯುರ್ವೇದ ಔಷಧ ಮಾರಾಟಗಾರನಾಗಿ ಜೀವನ ಸಾಗಿಸುತ್ತಿರುವುದು ಪತ್ತೆಯಾಗಿತ್ತು. ತಕ್ಷಣ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋರಮಂಗಲ ಡಬಲ್ ಮರ್ಡರ್ ಪ್ರಕರಣ: ಸಹೋದರರ ಸಹಿತ ಮೂವರು ಆರೋಪಿಗಳ ಬಂಧನ