ಬೆಂಗಳೂರು : ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ವಿ ಸೋಮಣ್ಣ ಸ್ಪಷ್ಟನೆ ನೀಡಿದ್ದು, ನಾನೆಲ್ಲಾದರೂ ಕಾಂಗ್ರೆಸ್‌ಗೆ ಹೋಗ್ತೀನಿ ಅಂತ ಹೇಳಿದೀನಾ? ಎಂದು ತಿಳಿಸಿದರು. ಗೋವಿಂದರಾಜನಗರ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ವಿ ಸೋಮಣ್ಣ, ವದಂತಿಗಳಿಗೆ ನಾನು ಉತ್ತರ ಕೊಡಕ್ಕಾಗಲ್ಲ. ನಾನ್ಯಾಕೆ ವದಂತಿಗಳಿಗೆ ಉತ್ತರ ಕೊಡಲಿ?. ನಾನೆಲ್ಲಾದರೂ ಕಾಂಗ್ರೆಸ್‌ಗೆ ಹೋಗ್ತೀನಿ ಅಂತ ಹೇಳಿದೀನಾ? ಎಂದು ಪ್ರಶ್ನಿಸಿದರು.
ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಆರ್ ಅಶೋಕ್, ಸೋಮಣ್ಣಗೆ ಯಾವುದೇ ಅಸಮಾಧಾನ ಇಲ್ಲ. ನಾನು ಸೋಮಣ್ಣ ಅವರ ಸಂಪರ್ಕದಲ್ಲಿ ಸತತವಾಗಿದ್ದೇನೆ. ಕಾಂಗ್ರೆಸ್‌ಗೆ ಹೋಗ್ತಾರೆ ಅಂತ ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಸೋಮಣ್ಣ ನಮ್ಮ ನಾಯಕ ಎಂದರು.
ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು. ಕರ್ನಾಟಕವನ್ನು ಗೆಲ್ಲಿಸುತ್ತೇವೆ, ನಮ್ಮ ವರಿಷ್ಠರು ಬರ್ತಿದಾರೆ. ಮತ್ತೆ ನಾವೇ ಗೆದ್ದು ಅಧಿಕಾರ ಹಿಡೀತೇವೆ. ಕಾಂಗ್ರೆಸ್ ಧೂಳೀಪಟ ಆಗಲಿದೆ. ಈ ರಾಜ್ಯದಲ್ಲಿ ಮತದಾರ ದೊಡ್ಡವನು. ಯಾರ ಪಾಳೇಗಾರಿಕೆ ನಡೆಯಲ್ಲ. ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಾಗ ಆಡಳಿತ ನಡೆಸದೇ ಬಿಟ್ ಹೋದ್ರು, ಕುದುರೆ ಏರದೇ ಬಿಟ್ ಹೋದ್ರು. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದ್ರೆ ಹೆಚ್ಡಿಕೆಯನ್ನು ಜನ ನಂಬಲ್ಲ. ಕಾಂಗ್ರೆಸ್ ಜೆಡಿಎಸ್ ಅವರದ್ದು ಕಳ್ಳಮಳ್ಳ ಆಟ. ಕಾಂಗ್ರೆಸ್ನ ಬಿ ಟೀಮ್ ಜೆಡಿಎಸ್. ಕಾಂಗ್ರೆಸ್ ವೋಟು ದಳದ್ದು, ದಳ ವೋಟ್ ಕಾಂಗ್ರೆಸ್ದು ಎಂದು ಟಾಂಗ್ ನೀಡಿದರು.
ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವಾಗಿ ಬಂದ್ಗೆ ಕಾಂಗ್ರೆಸ್ ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಡಿಕೆಶಿಗೆ ಸೋಲೋ ಭಯ ಕಾಡ್ತಿದೆ. ಸಿದ್ದರಾಮಯ್ಯ ಓಡಿ ಹೋಗುವ ಹಂತದಲ್ಲಿದ್ದಾರೆ. ಎಸಿಬಿ ರಚಿಸಿ ಅವರ ವಿರುದ್ಧ ಇರೋ ಎಲ್ಲ ಕೇಸ್ ಮುಚ್ಚಿ ಹಾಕಿದ್ರು. ಒಂದೇ ಒಂದು ಕೇಸ್ನಲ್ಲಿ ಬಂಧನ ಮಾಡಲಿಲ್ಲ. ಎಲ್ಲ ಕೇಸ್ ಮುಚ್ಚಿಹಾಕಿದ್ರು. ನಾವು ಪಾರದರ್ಶಕವಾಗಿದ್ದೇವೆ. ನಮ್ಮ ಪಕ್ಷದವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕ್ತೀವಿ, ಶಿಕ್ಷೆ ಆಗುತ್ತೆ. ನಾವು ಯಾವುದೇ ಕೇಸ್ ಮುಚ್ಚಿ ಹಾಕಿಲ್ಲ ಎಂದರು.