ಕರ್ನಾಟಕ

karnataka

By

Published : Jan 12, 2022, 6:59 AM IST

ETV Bharat / state

ಪಾದಯಾತ್ರೆ ಮೂಲಕ ರಾಜ್ಯವನ್ನು ಕೋವಿಡ್ ಹಬ್ ಮಾಡಲು ಹೊರಟಿದ್ದಾರೆ: ಸಚಿವ ಎಸ್.ಟಿ.ಸೋಮಶೇಖರ್

ಕೋವಿಡ್ ನಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ಜತೆ ನಿಂತು ಸಲಹೆ ನೀಡುವ ಮೂಲಕ ಜನಹಿತ ಕಾಪಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ಪಾದಯಾತ್ರೆ ಹೆಸರಿನಲ್ಲಿ ಕೊರೊನಾ ಹರಡುವ ಮೂಲಕ ಅಮಾಯಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಚಿವ ಎಸ್​​.ಟಿ ಸೋಮಶೇಖರ್​​ ಕಿಡಿಕಾರಿದ್ದಾರೆ.

Minister ST Somashekar
ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು:ಪಾದಯಾತ್ರೆ ಮೂಲಕ ಬೆಂಗಳೂರಿಗೆ ಕೊರೊನಾ ಹಬ್ಬಿಸಿ ಲಾಕ್​​​ಡೌನ್ ಮಾಡುವಂತಹ ಪರಿಸ್ಥಿತಿ ನಿರ್ಮಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಅವರು ಯೋಜನೆ ಜಾರಿಗಿಂತ ಕೊರೊನಾ ಹಬ್ಬಿಸಿ ಕರ್ನಾಟಕವನ್ನು ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಜನರ ಜೀವದ ಜತೆ ಚೆಲ್ಲಾಟ:

ಜನರ ಜೀವ ರಕ್ಷಣೆ ಹೊಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಚುನಾಯಿತ ಜನಪ್ರತಿನಿಧಿಗಳೆಲ್ಲರೂ ನಾಗರಿಕರ ಹಿತ ಕಾಯಬೇಕು. ಆದರೆ, ಕೋವಿಡ್ ನಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ಜತೆ ನಿಂತು ಸಲಹೆ ನೀಡುವ ಮೂಲಕ ಜನಹಿತ ಕಾಪಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ಪಾದಯಾತ್ರೆ ಹೆಸರಿನಲ್ಲಿ ಕೊರೊನಾ ಹರಡುವ ಮೂಲಕ ಅಮಾಯಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಸಚಿವ ಸೋಮಶೇಖರ್ ಕಿಡಿಕಾರಿದ್ದಾರೆ.

ಸರ್ಕಾರದ ನಿಯಮ ಗಾಳಿಗೆ:
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರ ನಿಯಂತ್ರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆ ಹೆಸರಿನಲ್ಲಿ ಜನರ ಗುಂಪು ಕಟ್ಟಿಕೊಂಡು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದೆ.

ಈಗಾಗಲೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರ ಜತೆಯಲ್ಲಿ ಹೆಜ್ಜೆ ಹಾಕಿದವರಿಗೂ ಸೋಂಕು ಹರಡುವ ಸಾಧ್ಯತೆಯಿದೆ. ಜನಜಾತ್ರೆ ಮಾಡಿಕೊಂಡು ಬೆಂಗಳೂರಿಗೆ ಕೋವಿಡ್ ಹಬ್ಬಿಸುವ ಕೆಲಸ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯ ಮಾಡುವುದರಲ್ಲೇ ಹೆಚ್ಚು ಆಸಕ್ತಿ:

ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಮೇಕೆದಾಟು ಯೋಜನೆ ಬಗ್ಗೆ ಆಸಕ್ತಿ ಇದ್ದಿದ್ದರೆ, ಚುನಾವಣೆಯಲ್ಲಿ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ತಮಿಳುನಾಡಿನ ಮುಖ್ಯಮಂತ್ರಿ ಜತೆ ಮಾತನಾಡಬಹುದಿತ್ತು. ಸುಪ್ರೀಂ ಕೋರ್ಟ್ ನಲ್ಲಿರುವ ದಾವೆಯನ್ನು ಹಿಂಪಡೆಯುವಂತೆ ಡಿಎಂಕೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿತ್ತು. ಆದರೆ ಕಾಂಗ್ರೆಸ್ ಆ ರೀತಿ ಮಾಡುವುದಿಲ್ಲ. ಏಕೆಂದರೆ ಅವರಿಗೆ ಸಮಸ್ಯೆಯನ್ನು ಬಗೆಹರಿಸುವುದಕ್ಕಿಂತ ಅದನ್ನು ಜೀವಂತವಾಗಿಟ್ಟು ರಾಜಕೀಯ ಮಾಡುವುದರಲ್ಲೇ ಹೆಚ್ಚು ಆಸಕ್ತಿ.

ಅಷ್ಟಕ್ಕೂ ಮೇಕೆದಾಟು ವಿಚಾರವಾಗಿ ಕಾಂಗ್ರೆಸ್​​​ನವರು ಎಷ್ಟು ಬಾರಿ ಚರ್ಚಿಸಿದ್ದಾರೆ?.ಸದನದಲ್ಲಿ ಮಾತನಾಡಿದ್ದಾರಾ? ಅಧಿಕಾರಾವಧಿಯಲ್ಲಿ ಡಿಪಿಆರ್ ಸಲ್ಲಿಕೆ ಮಾಡಲು ವಿಳಂಬ ಮಾಡಿದ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ, ಬಿಜೆಪಿ ಸರ್ಕಾರ 2019ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೆನ್ನೈನ ಹಸಿರು ಪೀಠ ನೀಡಿದ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು ಎಂದರು.

ಪಾದಯಾತ್ರೆ ನಾಟಕ::

ಅಂತರರಾಜ್ಯ ಜಲವಿವಾದ ಬಗೆಹರಿಸಿಕೊಳ್ಳದೇ 2013 ರಿಂದ 2019ರವರೆಗೆ ಕಾಲಹರಣ ಮಾಡಿದ ಕಾಂಗ್ರೆಸ್ ಈಗ ಪಾದಯಾತ್ರೆ ನಾಟಕವಾಡುತ್ತಿದೆ. ಆದರೆ, ಈ ಪಾದಯಾತ್ರೆ ಕಾಂಗ್ರೆಸ್​​ನ ಹಲವು ನಾಯಕರಿಗೆ ಇಷ್ಟವಿಲ್ಲ. ಇದೊಂದು ಒನ್ ಮ್ಯಾನ್ ಶೋನಂತಾಗಿದೆ. ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್​​ಗೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಮುಂದೆ ಕೋವಿಡ್​​ನಿಂದಾಗುವ ಹಾನಿಗೆ ಕಾಂಗ್ರೆಸ್ ನಾಯಕರೇ ನೇರ ಕಾರಣವಾಗಲಿದ್ದಾರೆ ಎಂದು ಸಚಿವ ಎಸ್​​.ಟಿ ಸೋಮಶೇಖರ್​​ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಮೂರನೇ ದಿನದ ಪಾದಯಾತ್ರೆ ಮುಕ್ತಾಯ; ಹೊಸ ಉತ್ಸಾಹ ಮೂಡಿಸಿತು ಸಿದ್ದರಾಮಯ್ಯ ಪುನರಾಗಮನ

ABOUT THE AUTHOR

...view details