ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಆರಂಭವಾಗುತ್ತಿದೆ. ನನ್ನ ಉಸ್ತುವಾರಿ ಜಿಲ್ಲೆಯಿಂದಲೇ ಆರಂಭವಾಗುತ್ತಿದೆ. ಭಾರತ್ ಜೋಡೋ ಯಾತ್ರೆ ಪಾದಯಾತ್ರೆ ಅನ್ಕೊಂಡಿದ್ದೆ. ಆದರೆ, ಇದು ಪಾದಯಾತ್ರೆ ಅಲ್ಲ ಅಲ್ಲಲ್ಲಿ ಹತ್ತೋದು ಇಳಿಯೋದು ಜೋಡಿಸೋದೇ ಇವರ ಯಾತ್ರೆ ಎಂದು ವಸತಿ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ್ ಜೋಡೊ ಕರ್ನಾಟಕದಲ್ಲಿ ಇಂದು ನನ್ನ ಉಸ್ತುವಾರಿ ಜಿಲ್ಲೆಯಿಂದಲೇ ಶುರುವಾಗಿದೆ. ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಯಾತ್ರೆ ಮಾಡಿದ್ದರು. ಕಾಶ್ಮೀರದಿಂದ ನೂರಾರು ಕಿಲೋಮೀಟರ್ ನಡೆದುಕೊಂಡು ಬಂದಿದ್ದರು.
ಆದರೆ, ಇವರ ಭಾರತ್ ಜೋಡೋ ಅಂದರೆ ಜೀಪ್, ಕಾರು ಹತ್ತಿ ಬರೋದು ಅಷ್ಟೇ. ಅದೇನು ಭಾರತ್ ಜೋಡೋ ಮಾಡ್ತಾರೋ ಗೊತ್ತಿಲ್ಲ. ರಾಹುಲ್ ಗಾಂಧಿ ಬಗ್ಗೆ ಗೌರವ ಇದೆ. ಅವರ ಬಗ್ಗೆ ಮಾತಾಡಲ್ಲ. ಅವರು ದೊಡ್ಡ ರಾಷ್ಟ್ರೀಯ ನಾಯಕರ ಮಗ. ಭಾರತೀಯರ ಸಾರ್ವಭೌಮತ್ವ, ದೇಶಪ್ರೇಮ, ಮೋದಿಯವರ ಚಿಂತನೆಗೆ ಕವಲುದಾರಿ ತರುವ ಕೆಲಸ ಈ ಯಾತ್ರೆ ಮಾಡುತ್ತಿದೆ ಅನ್ನೋದು ವೈಯಕ್ತಿಕ ಅಭಿಪ್ರಾಯ ಎಂದರು.
ಚಾಮರಾಜನಗರ ಜಿಲ್ಲೆ ಮಾಡಿದ್ದು ಜೆ.ಹೆಚ್.ಪಟೇಲರು. ಆ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಅಂತ ಅವರ ಜೊತೆ ಚರ್ಚೆ ಮಾಡಬೇಕಿದೆ. ಚಾಮರಾಜನಗರದ ಅಭಿವೃದ್ಧಿ ಮತ್ತು ಕೆರೆ ತುಂಬಿಸುವ ಕೆಲಸ ಮಾಡಿದ್ದು ಯಡಿಯೂರಪ್ಪನವರ ಬಿಜೆಪಿ ಸರ್ಕಾರ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ 110 ಕೋಟಿ ಬಿಡುಗಡೆ ಮಾಡಿ 15,16 ಕೆರೆ ತುಂಬಿಸಿ ಬರಡುಭೂಮಿ ಎಂಬ ಜಿಲ್ಲೆಯ ಹಣೆಪಟ್ಟಿಯನ್ನು ಹೋಗಲಾಡಿಸಿದ್ದೇವೆ ಎಂದು ವಿ ಸೋಮಣ್ಣ ಹೇಳಿದ್ದಾರೆ.
ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದ್ದು ಕೂಡ ಬಿಜೆಪಿ ಸರ್ಕಾರವೇ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಗೆ ಸ್ವಾಯತ್ತತೆ ಕೊಟ್ಡಿದ್ದು ನಾವು. ಬಂಡಿಪುರ, ನಾಗರಹೊಳೆ ಇರುವ ಪ್ರಕೃತಿಯ ಜಿಲ್ಲೆಯನ್ನು ದೇಶಕ್ಕೆ ಸಮರ್ಪಣೆ ಮಾಡುವ ಕೆಲಸ ಮಾಡಿದ್ದೇವೆ. ಮಲೆ ಮಾದೇಶ್ವರ ಪ್ರಾಧಿಕಾರ ಮಾಡಿ ಭಕ್ತರಿಗೆ ನೆರವು ಮಾಡಿದ್ದೇವೆ. ಹನೂರು ತಾಲೂಕು ಮಾಡಿದ್ದೇವೆ.