ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಡಿ.ವಿ ಸದಾನಂದಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಕೊಕ್ ನೀಡಲಾಗಿದೆ. ಮೋದಿ 1.O ಸರ್ಕಾರದಲ್ಲಿ ರತ್ನಗಂಬಳಿ ಹಾಸಿ ಡಿವಿಎಸ್‌ರನ್ನು 2.O ಸರ್ಕಾರದಲ್ಲಿ ಕೈಬಿಟ್ಟಿರುವುದು ಹಲವು ಅನುಮಾನಗಳು ಹುಟ್ಟುವಂತೆ ಮಾಡಿದೆ.
ಯಡಿಯೂರಪ್ಪ ಅವರ ನಂತರದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಅಲ್ಪ ಸಮಯದಲ್ಲೇ ಹುದ್ದೆ ಕಳೆದುಕೊಂಡಿದ್ದ ಡಿ.ವಿ ಸದಾನಂದಗೌಡರಿಗೆ ಹೈಕಮಾಂಡ್ ಅನುಕಂಪ ತೋರಿತ್ತು. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆ ಸದಾನಂದಗೌಡರಿಗೆ ಕ್ಯಾಬಿನೆಟ್ ದರ್ಜೆಯ ರೈಲ್ವೆ ಖಾತೆ ನೀಡಲಾಗಿತ್ತು.
ನಂತರ ರೈಲ್ವೆ ಖಾತೆ ವಾಪಸ್ ಪಡೆದು ಯೋಜನೆ ಮತ್ತು ಸಾಂಖಿಕ ಖಾತೆ ನೀಡಲಾಗಿತ್ತು. ಆದರೂ ಗೌಡರ ಮೇಲಿನ ವಿಶ್ವಾಸ ಕಡಿಮೆಯಾಗಿರಲಿಲ್ಲ. ಅದರ ಪ್ರತಿಫಲ ಮೋದಿ ನೇತೃತ್ವದಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದಲ್ಲಿಯೂ ಅವಕಾಶ ಸಿಕ್ಕಿತ್ತು.
ಕೇಂದ್ರದಲ್ಲಿ ರಾಜ್ಯದ ಪರ ಪ್ರಭಾವಿ ಸಚಿವರಾಗಿದ್ದ ಅನಂತ ಕುಮಾರ್ ನಿಧನದ ನಂತರ ಅವರು ನಿರ್ವಹಿಸುತ್ತಿದ್ದ ಮಹತ್ವದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಯಿತು. ಕೋವಿಡ್ ಸಾಂಕ್ರಾಮಿಕದ ವೇಳೆ ಇಡೀ ದೇಶಕ್ಕೆ ಔಷಧ ಸರಬರಾಜು ಮಾಡುವ ಬಹುದೊಡ್ಡ ಹೊಣೆಗಾರಿಕೆ ನಿಭಾಯಿಸುವ ಜವಾಬ್ದಾರಿ ನಿರ್ವಹಿಸಬೇಕಾಯಿತು.
ಕೋವಿಡ್ ವೇಳೆ ಪರಿಣಾಮಕಾರಿಯಾಗಿ ಅವರು ಕೆಲಸ ಮಾಡಿದ್ದಾರೆ. ಆದರೂ ಡಿವಿಎಸ್ಗೆ ಕೊಕ್ ನೀಡಲಾಗಿದೆ. ಕೇಂದ್ರದಿಂದ ಅನುಕಂಪ ಮತ್ತು ವಿಶ್ವಾಸ ಎರಡನ್ನೂ ಹೊಂದಿದ್ದ ಗೌಡರನ್ನು ಸಂಪುಟದಿಂದ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.