ಬೆಂಗಳೂರು: ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಕೆಐಎಡಿಬಿ ಭೂಮಿಯನ್ನು ಉದ್ಯಮಿಗಳಿಗೆ ನೀಡುತ್ತದೆ. ಆದರೆ ಉದ್ಯಮಿಗಳು ಈ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕೈಗಾರಿಕಾ ಸಚಿವ ಶೆಟ್ಟರ್ ಸಮೀಕ್ಷೆ ನಡೆಸಲು ಆದೇಶಿಸಿದ್ದರು. ಆದರೆ, ಈಗಿನ ಕೈಗಾರಿಕಾ ಸಚಿವ ನಿರಾಣಿ ಈ ಬಗ್ಗೆ ಭಿನ್ನರಾಗ ಹಾಡುತ್ತಿದ್ದಾರೆ.
ಇಲಾಖೆಯ ಸಚಿವರು ಬದಲಾಗುತ್ತಿದ್ದ ಹಾಗೆಯೇ ಅದಕ್ಕೆ ಸಂಬಂಧಿಸಿದ ನೀತಿ, ನಿಲುವುಗಳೂ ಬದಲಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಕೈಗಾರಿಕಾ ಉದ್ದೇಶಕ್ಕಾಗಿ ಕೊಡ ಮಾಡುವ ಭೂಮಿ ವಿಚಾರದಲ್ಲಿ ಈ ಹಿಂದಿನ ಕೈಗಾರಿಕಾ ಸಚಿವರು ಹಾಗೂ ಈಗಿನ ಸಚಿವರ ನಡುವೆ ತದ್ವಿರುದ್ಧ ನಿಲುವು ಇರುವುದು ಸ್ಪಷ್ವವಾಗಿದೆ. ಕೆಐಎಡಿಬಿ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಎಸ್ಐಡಿಸಿ) ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುತ್ತವೆ. ತಾವೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆ ಸ್ಥಾಪಿಸಲು ಭೂಮಿಯನ್ನು ಹಂಚಿಕೆ ಮಾಡುತ್ತದೆ. ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಕೆಐಎಡಿಬಿ ಹಾಗು ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೆಎಸ್ಎಸ್ಐಡಿಸಿ ನಿವೇಶನಗಳನ್ನು ನೀಡುತ್ತವೆ. ಆದರೆ, ಹಲವರು ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿಯನ್ನು ಪಡೆದಿದ್ದರೂ, ಅದನ್ನು ಅನ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಗಳೂ ಹೆಚ್ಚಾಗಿವೆ. ಇತ್ತ ಹಲವು ಉದ್ಯಮಿಗಳು ತಾವು ಪಡೆದ ಭೂಮಿಯಲ್ಲಿ ಉದ್ದೇಶಿತ ಉದ್ಯಮವನ್ನೇ ಸ್ಥಾಪಿಸಿಲ್ಲ.
ಹಿಂದಿನ ಕೈಗಾರಿಕಾ ಸಚಿವರಿಂದ ಸಮೀಕ್ಷೆಗೆ ಆದೇಶ:
ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಪಡೆದು ಅದನ್ನು ಅನ್ಯ ಉದ್ದೇಶಕ್ಕೆ ಬಳಸಿದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಡಳಿತದಲ್ಲಿದ್ದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಥವಾ ಸರ್ಕಾರದಿಂದ ನೇರವಾಗಿ ಕೈಗಾರಿಕಾ ಉದ್ದೇಶಗಳಿಗೆ ಭೂಮಿಯನ್ನು ಪಡೆದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಅಥವಾ ಕೈಗಾರಿಕೆಯನ್ನು ಆರಂಭಿಸದೇ ಹಾಗೆಯೇ ಬಿಟ್ಟಿದ್ದರೂ, ಅಂತಹ ಭೂಮಿಗಳ ಸರ್ವೆ ನಡೆಸಿ ವಾಪಸ್ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭಿಸಲಿದ್ದೇವೆ ಎಂದು ತಿಳಿಸಿದ್ದರು.
ಈ ಸಂಬಂಧ ಸಮೀಕ್ಷೆ ನಡೆಸಿ ಅದರ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ವಾಸ್ತವದಲ್ಲಿ ಕೆಐಎಡಿಬಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಿರಲಿಲ್ಲ. ಸಚಿವರ ಸೂಚನೆ ಇದ್ದರೂ, ಅದಕ್ಕೆ ಹೆಚ್ಚಿನ ಲಕ್ಷ್ಯ ಕೊಡಲು ಹೋಗಿರಲಿಲ್ಲ. ಹಿಂದಿನ ಸಚಿವ ಶೆಟ್ಟರ್ ಆದೇಶ ಕೇವಲ ಘೋಷಣೆಗೆ ಮಾತ್ರ ಸೀಮಿತವಾಯಿತು.