ಬೆಂಗಳೂರು:ಬೆಂಗಳೂರು ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಬಸ್ ಮಾರ್ಗವನ್ನು ತೆರೆಯಲಾಗಿದೆ. ನೈಸ್ ಸಾರಿಗೆ ಸೇವೆಗಳ ಉಪಯೋಗವನ್ನು ಪ್ರಯಾಣಿಕರು ಅತಿ ಹೆಚ್ಚು ಪಡೆಯಬೇಕು. ಪ್ರಮುಖವಾಗಿ ವಿವಿಧ ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ಗೆ ಬೆಳಗ್ಗೆ ಮತ್ತು ಸಂಜೆ ಒಟ್ಟು 65 ಟ್ರಿಪ್ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಬೆಂಗಳೂರಿನ ಹೊರವಲಯದ ಮಾದವಾರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಮಾರ್ಗ ಸಂಖ್ಯೆ ನೈಸ್- 10 ಗೆ ಚಾಲನೆ ನೀಡಿ ಮಾತನಾಡಿದರು. ನೈಸ್ ಕಾರಿಡಾರ್ ಸಮೂಹ ಸಂಸ್ಥೆ ಬಿಎಂಟಿಸಿ ಬಸ್ಗಳಿಗೆ ನೈಸ್ ಟೋಲ್ ಶುಲ್ಕವನ್ನು ರದ್ದು ಮಾಡಲು ಅಥವಾ ಕಡಿಮೆ ಮಾಡಿ ಪಾಸ್ ವಿತರಿಸಬೇಕು. ಇದರಿಂದ ಸಾರಿಗೆ ಸಂಸ್ಥೆ ಹೆಚ್ಚು ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಸೇವೆಗಳನ್ನು ಒದಗಿಸಬಹುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹಾಗೂ ಹೊರ ವಲಯದ ಪ್ರಯಾಣಿಕರ ದಟ್ಟಣೆ/ಬೇಡಿಕೆ ಅನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುವ ಧ್ಯೇಯದೊಂದಿಗೆ ಪ್ರಯಾಣಿಕರಿಗೆ ದಕ್ಷ, ಉತ್ತಮ, ಸುಲಭ ಸಾರಿಗೆ ಸೇವೆ ಒದಗಿಸಲು ಸಾರಿಗೆ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಪ್ರಯಾಣಿಕರ ಹೊಣೆಗಾರಿಕೆಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 25 ಕಿ.ಮೀ. ವರೆಗೆ ಕಾರ್ಯಾಚರಣೆ ವ್ಯಾಪ್ತಿ ಹೊಂದಿದ್ದು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಏಕೈಕ ಸಾರಿಗೆ ಸಂಸ್ಥೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿದಿನ 5,571 ಬಸ್ಗಳು 57,565 ಸುತ್ತುವಳಿಗಳನ್ನು ಮತ್ತು 11.33 ಲಕ್ಷ ಕಿ.ಮೀ ಪ್ರಯಾಣಿಸುತ್ತದೆ. ಪ್ರತಿದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.