ಬೆಂಗಳೂರು :ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಸಶಕ್ತವಾಗಿದೆ. ಮಹಿಳೆಯರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಶುಕ್ರವಾರ ಶಾಂತಿನಗರದಲ್ಲಿ ಬಿಎಂಟಿಸಿ ಹೊಸ ಬಸ್‌ಗಳು, ಬೊಲೆರೊ ಹಾಗೂ ತಪಾಸಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ 3745 ಚಾಲನಾ ಸಿಬ್ಬಂದಿ ಹಾಗೂ 726 ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಹೊಸದಾಗಿ 1433 ಚಾಲನಾ ಸಿಬ್ಬಂದಿ ಮತ್ತು 2738 ತಾಂತ್ರಿಕ ಸಿಬ್ಬಂದಿ ನೇರ ನೇಮಕಾತಿ ಮಾಡಲು ಸರ್ಕಾರದಿಂದ ಅನುಮತಿಗೆ ಕಾಯಲಾಗುತ್ತಿದೆ ಎಂದು ತಿಳಿಸಿದರು.
ನಿಗಮದ ಖಾಲಿ ನಿವೇಶನದಲ್ಲಿ ವಾಣಿಜ್ಯ ಆದಾಯ ಗಳಿಸುವ ಉದ್ದೇಶದಿಂದ ಟೆಂಡರ್‌ನಲ್ಲಿ ಆಯ್ಕೆಯಾಗಿರುವ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಔಟ್‌ಲೆಟ್‌ಗಳನ್ನು ತೆರೆಯಲು ಒಪ್ಪಿಗೆ ನೀಡಲಾಗಿದೆ. ಇನ್ನೂ 36 ಸ್ಥಳಗಳಲ್ಲಿ ಬಂಕ್ ತೆರೆಯಲು ಮರು ಟೆಂಡರ್ ಕರೆದು ಆಯ್ಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸದ್ಯ ನಮ್ಮಲ್ಲಿರುವ ಸರಕು ಸಾಗಣೆ ಯೋಜನೆಗೆ 6 ಟನ್ ಸಾಮರ್ಥ್ಯದ 20 ಪೂರ್ಣ ನಿರ್ಮಿತ ಟ್ರಕ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದನ್ನು ಸರಕು ಸಾಗಣೆ ಜೊತೆಗೆ ನಿಗಮದ ಘಟಕ ಹಾಗೂ ವಿಭಾಗೀಯ ಕಾರ್ಯಗಾರದಲ್ಲೂ ಬಳಸಲಾಗುತ್ತದೆ. ಸುಖಾಸೀನ ವಾಹನಗಳ ಬೇಡಿಕೆ ಹೆಚ್ಚಿರುವುದರಿ೦ದ ಹಾಗೂ ಖಾಸಗಿಯವರೊಂದಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ 44 ಹೊಸ ಹವಾನಿಯಂತ್ರಿತ ರಹಿತ ಹಾಗೂ 4 ಹವಾನಿಯಂತ್ರಿತ ಸ್ಲೀಪರ್ ಬಸ್ಗಳನ್ನು ಖರೀದಿಸಲಾಗುವುದು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 450 ವಿದ್ಯುತ್ ಚಾಲಿತ ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಟೆಂಡರ್ ಕರೆಯಲಾಗುವುದು. 20 ಸಾಮಾನ್ಯ ಹಾಗೂ 4 ಹವಾನಿಯಂತ್ರಿತ ಸ್ಲೀಪರ್ ವಾಹನಗಳನ್ನು ಖರೀದಿಸಲಾಗುವುದು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ಹಲವು ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ನಿಗಮದ ನೌಕರರು ಕ್ಯಾನ್ಸರ್ ಕಾಯಿಲೆಗೆ ವೈದ್ಯರ ಸಲಹೆ ಮೇರೆಗೆ ಕಿಮೋ ಅಥವಾ ರೇಡಿಯೋ ಥೆರಪಿಗೆ ಒಳಪಟ್ಟಲ್ಲಿ ಸರ್ಕಾರದಲ್ಲಿ ಜಾರಿ ಇರುವಂತೆಯೇ ಚಿಕಿತ್ಸಾ ಅವಧಿಯಲ್ಲಿ ಗರಿಷ್ಠ ಆರು ತಿಂಗಳು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.