ಸಂಸದ ಡಿ ವಿ ಸದಾನಂದಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರು: ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿರುವ ಸಚಿವ ರಾಜಣ್ಣನ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜಣ್ಣನ ಮೂಲಕ ಸಿಎಂ ಕ್ಷಮೆ ಕೇಳಿಸಬೇಕೆಂದು ಸಂಸದ ಡಿ ವಿ ಸದಾನಂದಗೌಡ ಆಗ್ರಹಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋಲಾರದ ಮುಳಬಾಗಿಲಿನಲ್ಲಿ ಬ್ಯಾನರ್ ಹರಿದಿದ್ದ ಎಷ್ಟು ಜನರನ್ನು ಬಂಧಿಸಿದ್ದೀರಿ? ಎಂದು ಪ್ರಶ್ನಿಸಿದ ಅವರು, ಮುಂದೆ ಸಿದ್ದರಾಮಯ್ಯನವರ ಫೋಟೋ ಇರುವ ಬ್ಯಾನರ್ಗಳು ಹರಿದು ಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು.
ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಿಗೆ ಬೊಂಬೆ ಕಂಡಿತೇ? ಕಾಮಾಲೆ ರೋಗ ಇದ್ದವರಿಗೆ ಎಲ್ಲವೂ ಅರಸಿನವಾಗಿ ಕಾಣುತ್ತದೆ. ಸಿದ್ದರಾಮಯ್ಯರ ಓಲೈಕೆ ಮುಂದುವರೆದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ ಮೂರು ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ವಿಶ್ಲೇಷಿಸಿದರು.
14 ಬಜೆಟ್ ಕೊಟ್ಟ ಸಿದ್ದರಾಮಯ್ಯನವರು ತಮ್ಮ ಸಚಿವರನ್ನು ಹೇಗೆ ತರಬೇತಿ ಮಾಡಿದ್ದಾರೆ ಎಂಬುದು ಕಾಣುತ್ತಿದೆ. ಅಯೋಧ್ಯೆಯಲ್ಲಿ ಇದೇ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ವಿಚಾರ ಗಮನಿಸಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಎಲ್ಲರಿಗೂ ತಲೆ ಕೆಟ್ಟಿದೆ ಎಂದು ಟೀಕಿಸಿದರು.
ರಾಮ ಇಲ್ಲ ಎಂದು ಅಫಿಡವಿಟ್ ಹಾಕಿದ ಈ ಅಯೋಗ್ಯರು ಇಂಥ ಹೇಳಿಕೆ ನೀಡುವುದು ಅಚ್ಚರಿ ವಿಚಾರವಲ್ಲ. ಶ್ರೀರಾಮನ ಬಗ್ಗೆ ಹೀಗೆ ಮಾತನಾಡಿದರೆ ಅದ್ದರಿಂದ ಜನರು ಎದ್ದುಬಿಡುವ ಆತಂಕ ಉಂಟಾಗಿದೆ. ಶ್ರೀರಾಮನ ಸಂಬಂಧದ ವಾಲ್ ಪೋಸ್ಟರ್, ಬ್ಯಾನರ್ಗಳನ್ನು ಏಜೆಂಟರ ಮೂಲಕ ಹರಿಯಿಸುತ್ತಿದ್ದಾರೆ. ಹೈಕೋರ್ಟ್ ವಕೀಲ ಒಬ್ಬರನ್ನು ನ್ಯಾಯಮೂರ್ತಿ ಆಗಲು ಶಿಫಾರಸು ಮಾಡಿದ್ದರು. ಅದು ಬೇಡ ಎಂದು ವಕೀಲರು ಹೇಳಿದ್ದರಂತೆ. ಸಿದ್ದರಾಮಯ್ಯನವರೇ ನೀವು ಇವತ್ತು, ಅದೇ ಸ್ಥಾನದಲ್ಲಿ ಇರಬೇಕಿತ್ತು ಎಂದು ಹೇಳಿದರು.
ಸಿದ್ದರಾಮಯ್ಯನವರ ಪರವಾಗಿ ಕೆಲವರು, ಇನ್ನೂ ಕೆಲವರು ಡಿ ಕೆ ಶಿವಕುಮಾರ್ ಪರವಾಗಿ ಕೆಲಸ ಮಾಡುತ್ತಾರೆ. ಇಲ್ಲಿನ ಪರಿಸರದಲ್ಲಿ ಶ್ರೀರಾಮ ಇದ್ದಾನೆ. ಆರಾಧ್ಯ ದೈವ ಶ್ರೀರಾಮನನ್ನು ನೋಡಲು ಎಲ್ಲರೂ ಹೋಗುತ್ತಿದ್ದಾರೆ. ಫಾರೂಕ್ ಅಬ್ದುಲ್ಲ ಅವರಂಥ ವ್ಯಕ್ತಿ ಪ್ರಧಾನಿಯ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ನವರಿಂದ ರಹೀಮ ನಾಮ ಜಪ:ಛಲವಾದಿ ನಾರಾಯಣಸ್ವಾಮಿ
ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮನೆಯಲ್ಲಿ ರಾಮನಾಮ, ಹೊರಗಡೆ ಮಾತ್ರ ಮತ ಓಲೈಕೆಗಾಗಿ ರಹೀಮ ನಾಮ. ನಿಮ್ಮ ಬಂಡವಾಳ ನನಗೆ ಗೊತ್ತಿದೆ. ಇಷ್ಟೆಲ್ಲಾ ಮಾಡಿದರೂ ನಿಮ್ಮ ಪಕ್ಷಕ್ಕೆ ಭವಿಷ್ಯ ಇಲ್ಲ. ಜನತೆ ನಿಮ್ಮ ಅಲ್ಪಸಂಖ್ಯಾತರ ಓಲೈಕೆಯ ನಡೆಗೆ ಪಾಠ ಕಲಿಸುತ್ತಾರೆ. ಕಾಂಗ್ರೆಸ್ಸಿನ ಸಂಕುಚಿತ ಭಾವನೆಗಳಿಗೆ ಜನರು ಉತ್ತರ ಕೊಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಹಬ್ಬದ ವಾತಾವರಣ ಇದೆ. ಜನರ ಅಸ್ಮಿತೆಯಾಗಿದ್ದ ಶ್ರೀರಾಮಮಂದಿರ ನಿರ್ಮಾಣ ಆಗಿದೆ. 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದನ್ನು ಕಾಂಗ್ರೆಸ್‍ನವರು ಮಾತ್ರ ಮನ ಬಂದಂತೆ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನಿಲುವನ್ನು ವಿರೋಧಿಸುವುದಾಗಿ ತಿಳಿಸಿದರು.
ಸಿದ್ದರಾಮಯ್ಯನವರ ಟೀಕೆಗೆ ಉತ್ತರ ಸಿಗಲು ಶುರುವಾದ ಬಳಿಕ ಅವರು ಬದಲಾವಣೆ ಮಾಡಿದ್ದಾರೆ. ರಾಮಪ್ರಜ್ಞೆಯನ್ನು ಅವರ ಮನಸ್ಸಿನಲ್ಲಿ ತಂದ ಜನತೆಗೆ ಕೃತಜ್ಞತೆಗಳು. ಸಚಿವರಾದ ಕೆ ಎನ್ ರಾಜಣ್ಣ, ಪ್ರಿಯಾಂಕ್ ಖರ್ಗೆಯವರು ಮನ ಬಂದಂತೆ ಮಾತನಾಡಿದ್ದು, ಸೂಕ್ತ ಸಂದರ್ಭದಲ್ಲಿ ಸರಿಯಾದ ಉತ್ತರ ಸಿಗಲಿದೆ ಎಂದು ತಿರುಗೇಟು ನೀಡಿದರು.
ಶ್ರೀರಾಮನ ಪೋಸ್ಟ್ರ್:ಶ್ರೀ ರಾಮನ ಪೋಸ್ಟ್ರಗಳಿಗೆ ಕತ್ತರಿ ಹಾಕುತ್ತಿದ್ದಾರೆ. ಹಿಂದೂ ಪರ ಕಾರ್ಯಕರ್ತರು ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಅದನ್ನು ಕಾಂಗ್ರೆಸ್ಸಿಗರು ಬಿಸಾಡುತ್ತಿದ್ದಾರೆ. ನಾವು ಕೊಟ್ಟ ಅಕ್ಕಿಯನ್ನು ಇವರು ಮಂತ್ರಾಕ್ಷತೆಗೆ ಬಳಸುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 5 ಕೆಜಿ ಅಕ್ಕಿ ಮೋದಿಜೀ ಅವರದು. ನಿಮ್ಮ ಅಕ್ಕಿ ಎಲ್ಲಿ? ಎಂದು ಪ್ರಶ್ನಿಸಿದರು. ಇದು ಜನರ ಕಿವಿಮೇಲೆ ಹೂವು ಇಡುವ ಕಾರ್ಯ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಮತ ಓಲೈಕೆಗಾಗಿ ಖರ್ಗೆಯಿಂದ ರಹೀಮ ನಾಮ:ಪ್ರಿಯ ಕೃಷ್ಣ, ಲೇಔಟ್ ಕೃಷ್ಣಪ್ಪ 40-50 ಅಡಿ ಕಟೌಟ್ ಹಾಕಿದ್ದಾರೆ. ಅದಕ್ಕೆ ಕತ್ತರಿ ಹಾಕಿದ್ದೀರಾ? ಪ್ರತಿಯೊಬ್ಬರ ಮನಸ್ಸಿನಲ್ಲಿ ಶ್ರೀರಾಮ ಇದ್ದಾನೆ. ಪ್ರಿಯಾಂಕ್ ಖರ್ಗೆಯವರ ಮನೆಯಲ್ಲಿ ರಾಮನಾಮ, ಹೊರಗಡೆ ಮಾತ್ರ ಓಟ್ ಓಲೈಕೆಗಾಗಿ ರಹೀಮ ನಾಮ ಎಂದು ಆರೋಪಿಸಿದರು. ನಿಮ್ಮ ಬಂಡವಾಳ ನನಗೆ ಗೊತ್ತಿದೆ. ಇಷ್ಟೆಲ್ಲ ಮಾಡಿದರೂ ನಿಮ್ಮ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದರು.
ಸಂವಿಧಾನದಲ್ಲೂ ರಾಮ ಇದ್ದಾರೆ. ಡಾ. ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಹೆಸರಿನಲ್ಲಿ ರಾಮ ಇದ್ದಾನೆ. ಹಿಂದೂ ಧರ್ಮದ ನ್ಯೂನತೆ ಸರಿಪಡಿಸಲು ಅವರು ಹೋರಾಟ ಮಾಡಿದ್ದರು. ಪರಿವರ್ತನೆಯ ದಾರಿ ತೋರಲು ಅವರು ಬೌದ್ಧ ಧರ್ಮಕ್ಕೆ ಹೋದರು. ಅವರು ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಹೋಗಲಿಲ್ಲ ಎಂದು ವಿಶ್ಲೇಷಿಸಿದರು. ಅಯೋಧ್ಯೆ ಪೂಜಾ ಕೆಲಸಕ್ಕೆ ನೇಮಿಸಿದ 24 ಪೂಜಾರಿಗಳ ಪೈಕಿ ಇಬ್ಬರು ದಲಿತರಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರಲು ಹೆಚ್ಚು ಸ್ಥಾನ ಗೆಲ್ಲಬೇಕೆಂದು ಅವರ ಪುತ್ರ ಯತೀಂದ್ರ ಅವರು ಹೇಳಿಕೆ ನೀಡಿದ್ದಾರೆ. ಗ್ಯಾರಂಟಿ ಮುಂದುವರೆಯಲು ಹೆಚ್ಚು ಲೋಕಸಭಾ ಸ್ಥಾನ ಕೊಡಿ ಎಂಬಂತೆ ಮಾತನಾಡಿದ್ದಾರೆ. ಇದು ಡಿ ಕೆ ಶಿವಕುಮಾರ್ಗೆ ಚೆಕ್‍ಮೇಟ್. ಗ್ಯಾರಂಟಿ ಮುಂದುವರೆಯುವುದಿಲ್ಲ ಎಂದು ಯತೀಂದ್ರ ಹೇಳಿದಂತಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಲಾರದು ಎಂಬ ಮಾತು ಅವರದ್ದು ಎಂದು ಛಲವಾದಿ ನಾರಾಯಣಸ್ವಾಮಿಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:ನಾನು ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಇದೆ, ಹೋಗುವ ಪ್ರಯತ್ನ ಮಾಡುತ್ತೇನೆ: ಮಾಜಿ ಪ್ರಧಾನಿ ದೇವೇಗೌಡ