ಬೆಂಗಳೂರು :ಮುಂಬರಲಿರುವ ಚುನಾವಣೆಗಳು, ಉಪ ಚುನಾವಣೆಯ ಪರೀಕ್ಷೆಯಲ್ಲಿ ಗೆದ್ದು ನಿಮ್ಮ ನಾಯಕತ್ವವನ್ನು ದೃಢಪಡಿಸಿಕೊಳ್ಳಿ ಎಂದು ಯುವ ಮೋರ್ಚಾ ಮುಖಂಡರಿಗೆ ಕಂದಾಯ ಸಚಿವ ಆರ್.ಅಶೋಕ್ ಕರೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲಲು ಯುವ ಮೋರ್ಚಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ದೂರದೃಷ್ಟಿಯ ಯೋಜನೆಗಳಿಂದ ಪಕ್ಷ ಬಲಿಷ್ಠವಾಗಿದೆ. ನಮ್ಮ ಸರ್ಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಜೊತೆಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಬಿಜೆಪಿಯನ್ನು ಈಗ ಪ್ರಪಂಚವೇ ದೊಡ್ಡ ಪಕ್ಷವಾಗಿ ಗುರುತಿಸುತ್ತಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ನಾನೂ ಕೂಡ ಯುವಮೋರ್ಚಾದಿಂದ ಬಂದವನು
ಪ್ರಧಾನಿ ಮೋದಿ 18ರಿಂದ 20 ಗಂಟೆ ಕೆಲಸ ಮಾಡುತ್ತಾರೆ. ಕೋವಿಡ್‍ನಿಂದ ಹೊರ ಬರಲು ನರೇಂದ್ರ ಮೋದಿ ಅವರ ಶ್ರಮವೂ ಕಾರಣವಾಗುತ್ತಿದೆ. ಅಯೋಧ್ಯೆ, ಕಾಶ್ಮೀರದ ವಿಚಾರ, ಭಯೋತ್ಪಾದನೆ ಮೊದಲಾದ ವಿಚಾರಗಳಲ್ಲಿ ದಿಟ್ಟ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಅಂಥ ಚಮತ್ಕಾರವನ್ನು ಬಿಜೆಪಿ ಮಾಡಿದೆ. ಬಿಜೆಪಿ ಈ ದೇಶಕ್ಕೆ ಅನಿವಾರ್ಯ. ಮತ ಬ್ಯಾಂಕ್‍ಗಾಗಿ ದೇಶವನ್ನು ಬಲಿ ಕೊಡುವ ಪರಿಸ್ಥಿತಿ ಬರದಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಾನೂ ಕೂಡ ಯುವ ಮೋರ್ಚಾದಿಂದಲೇ ಬಂದವನು. ಹಾಗಾಗಿ, ನನಗೆ ಯುವ ಮೋರ್ಚಾ ವೇದಿಕೆ ಅತ್ಯಂತ ಇಷ್ಟವಾದದ್ದಾಗಿದೆ. ಕಾವೇರಿ ನದಿಯಂತೆ ಬಿಜೆಪಿ ಹರಿಯುವ ನದಿ. ಆ ಹರಿಯುವ ನದಿಗೆ ಯುವ ಮೋರ್ಚಾ ಒಂದು ಕವಲಾಗಿ ಸೇರುತ್ತದೆ. ದೊಡ್ಡ ನದಿ ಸೇರುವ ದೊಡ್ಡ ತೊರೆ ಇದಾಗಿದೆ. ಯುವ ಮೋರ್ಚಾ ಸಂಘಟನೆಯಿಂದ ಬಂದವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತವೆ ಎಂದರು.
ಕಾಂಗ್ರೆಸ್ಗೆ ರಾಷ್ಟ್ರೀಯ ಅಧ್ಯಕ್ಷರೇ ಸಿಕ್ಕಿಲ್ಲ
ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿ, ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟರು. ಕೊರೊನಾ ಎರಡು ಅಲೆಗಳು ಬಂದು ಹೋಗಿವೆ. 3ನೇ ಅಲೆ ಬರುವಂತಿದೆ. ಆದರೂ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಸಿಕ್ಕಿಲ್ಲ. ರಾಜ್ಯದ ಯುವ ಕಾಂಗ್ರೆಸ್‍ನಲ್ಲೂ ಸಮಸ್ಯೆ ಮುಂದುವರಿದಿದೆ. ಗೆದ್ದವರು ಒಬ್ಬರು, ಇನ್ನೊಬ್ಬರಿಗೆ ಅಧ್ಯಕ್ಷತೆ, ಅದರಲ್ಲೂ ಗುಂಪುಗಾರಿಕೆ- ಹೊಡೆದಾಟ ಮುಂದುವರಿದಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ರಂಗಮಂದಿರ, ಚಿತ್ರಮಂದಿರ ತೆರೆಯಲು ಅನುಮತಿ, ಕ್ಲಬ್‌ಗಳಿಗೆ ಇನ್ನೂ ಪರ್ಮಿಷನ್ ಸಿಕ್ಕಿಲ್ಲ : ಆರ್. ಅಶೋಕ್