ಖಾಸಗಿ ಸಂಸ್ಥೆಗಳಿಗೆ ಜಮೀನು ಶಾಶ್ವತ ಪರಭಾರೆ: ಕೋವಿಡ್ ಹಿನ್ನೆಲೆ ಸಚಿವರು, ಶಾಸಕರ 30 ರಷ್ಟು ವೇತನ ಕಡಿತ
ಇಂದು ನಡೆದ ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲಾಗಿರುವ ಕೋವಿಡ್ 19 ಚಿಕಿತ್ಸಾ ದರಕ್ಕೆ ಅಸ್ತು ಎನ್ನಲಾಗಿದೆ. ಜೊತೆಗೆ ಕೋವಿಡ್ ಅವಧಿ ಮುಗಿಯುವವರೆಗೆ ಬೆಂಗಳೂರಿನಲ್ಲಿರುವ ಎಲ್ಲಾ 35 ಪಿಹೆಚ್ಸಿ, 14 ಹೆಚ್ ಸಿಹೆಚ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡಲು ಸಭೆ ನಿರ್ಧರಿಸಿದೆ. ಇದೇ ವೇಳೆ ವಿವಿಧ ಖಾಸಗಿ ಸಂಸ್ಥೆಗಳು, ಸೊಸೈಟಿಗಳು, ಸಂಸ್ಥೆಗಳಿಗೆ ನೀಡಿರುವ ಜಮೀನು, ಜಾಗದ ಗುತ್ತಿಗೆಯನ್ನು ಶಾಶ್ವತವಾಗಿ ಸಂಸ್ಥೆಗಳಿಗೆ ಬಿಟ್ಟು ಕೊಡುವ ತೀರ್ಮಾನಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆ
ಬೆಂಗಳೂರು: ವಿವಿಧ ಖಾಸಗಿ ಸಂಸ್ಥೆಗಳು, ಸೊಸೈಟಿಗಳು, ಸಂಸ್ಥೆಗಳಿಗೆ ನೀಡಿರುವ ಜಮೀನು, ಜಾಗದ ಗುತ್ತಿಗೆಯನ್ನು ಶಾಶ್ವತವಾಗಿ ಆಯಾ ಸಂಸ್ಥೆಗಳಿಗೆ ಬಿಟ್ಟು ಕೊಡುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಕೊಟ್ಟಿರುವ ಉದ್ದೇಶಕ್ಕಾಗಿ ಮಾತ್ರ ಆ ಭೂಮಿಯನ್ನು ಬಳಸಿರಬೇಕು. ಒಂದು ವೇಳೆ ಭೂಮಿಯನ್ನು ಬಳಸಿಲ್ಲವಾದರೆ ಅದನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದರು.
ಕರ್ನಾಟಕ ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ಅಸ್ತು:ರಾಜ್ಯದ ಕೈಗಾರಿಕೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದ್ದು, ಕರ್ನಾಟಕ ಕೈಗಾರಿಕಾ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಈ ತಿದ್ದುಪಡಿ ಕೈಗಾರಿಕಾ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ. ಈ ತಿದ್ದುಪಡಿ ಕಾನೂನು, ಉನ್ನತ ಮಟ್ಟದ ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿ ಅನುಮೋದನೆ ನೀಡಿದರೆ, ಕೈಗಾರಿಕೆಯನ್ನು ಆ ಭೂಮಿಯಲ್ಲಿ ತಕ್ಷಣ ಪ್ರಾರಂಭಿಸಲು ಅನುವು ಮಾಡಲಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಈ ಕಾನೂನು ಇದೆ. ರಾಜ್ಯದಲ್ಲಿ ಎಲ್ಲಾ ಕೈಗಾರಿಕೆಗಳಿಗೂ ಈ ಕಾನೂನು ಅನ್ವಯವಾಗಲಿದೆ ಎಂದರು.
ತಕ್ಷಣವೇ ಕೈಗಾರಿಕೆಗಳಿಗೆ ಸಿಂಗಲ್ ವಿಂಡೋ ಅಡಿ ಎಲ್ಲಾ ಅನುಮತಿ ಸಿಗಲಿದೆ. ಜಿಲ್ಲಾ ಮಟ್ಟದ ಕಮಿಟಿಯಲ್ಲಿ ಅನುಮತಿ ಸಿಕ್ಕ ತಕ್ಷಣವೇ ಸಿವಿಲ್ ಕಾಮಗಾರಿಗಳ ಎಲ್ಲಾ ರೀತಿಯ ಕೆಲಸ ಮಾಡಬಹುದು. ಎಲ್ಲಾ ಯೋಜನೆಗಳಿಗೆ ಅನುಮತಿಗಾಗಿ ಕಾಯುವ ಅಗತ್ಯವಿಲ್ಲ. 15 ಕೋಟಿ ರೂ. ಒಳಗೆ ಬಂಡವಾಳ ಇರೋ ಕೈಗಾರಿಕೆಗಳು ಜಿಲ್ಲಾ ಕಮಿಟಿ ವ್ಯಾಪ್ತಿಗೆ ಬರಲಿದ್ದರೆ, ಅದಕ್ಕಿಂತ ಮೇಲ್ಪಟ್ಟ ಕೈಗಾರಿಕೆಗಳು ರಾಜ್ಯ ಸಮಿತಿ ವ್ಯಾಪ್ತಿಗೆ ಬರುತ್ತದೆ ಎಂದರು. ಇದರ ಜೊತೆಗೆ ವಿದ್ಯುತ್ ವಾಹನ ತಯಾರಿಕಾ ಕೈಗಾರಿಕೆಗಳಿಗೆ ಕಂದಾಯ ಇಲಾಖೆ ಸ್ಟಾಂಪ್ ಡ್ಯೂಟಿಯಿಂದ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನ:
* 2021 ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ರಚನೆ
* ಕರ್ನಾಟಕ ಶಾಸಕರು, ಜನಪ್ರತಿನಿಧಿಗಳ ವೇತನ, ಪಿಂಚಣಿ, ಭತ್ಯೆ ಇತರೆ (ತಿದ್ದುಪಡಿ) ವಿಧೇಯಕ 2020 ಅನುಮೋದನೆ
* ಸಚಿವ, ಶಾಸಕರ ವೇತನದಲ್ಲಿ ಶೇ.30 ಕಡಿತಕ್ಕೆ ಸಂಪುಟದಲ್ಲಿ ಅಸ್ತು.
* ವಿವಿಧ ಯೋಜನೆಗಳಲ್ಲಿನ ವಿವಿಧ ಹಂತದಲ್ಲಿರುವ 9.74 ಲಕ್ಷ ವಸತಿ ಕಾಮಗಾರಿಗಳಿಗೆ 10,194.4 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ
* ಜೀವ ರಕ್ಷಕ ಸಾಧನಗಳ(Advance life support) ಒಳಗೊಂಡ ಆ್ಯಂಬುಲೆನ್ಸ್ 120 ಗಳನ್ನು 32.04 ಕೋಟಿ ರೂ ಖರೀದಿಗೆ ಅನುಮೋದನೆ.
* ತಿರುಪತಿ ತಿರುಮಲದಲ್ಲಿ 7.5 ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಹೊಂದಿದೆ. ಆ ಭೂಮಿಯಲ್ಲಿ 200 ಕೋಟಿ ರೂ. ಮೊತ್ತದಲ್ಲಿ ಕಲ್ಯಾಣ ಮಂಟಪ, ಯಾತ್ರಿ ನಿವಾಸ, ಕಲ್ಯಾಣಿ, ಇತರೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಯೋಜನೆ ಕಾರ್ಯಗತಗೊಳಿಸಲಿದೆ.
* 406.41 ಕೋಟಿ ರೂ ರೈಲ್ವೆ ಲೈನ್ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ. ಈ ಯೋಜನೆಯಡಿ ಬೈಯಪ್ಪನಹಳ್ಳಿ-ಹೊಸೂರು
* 48 ಕಿ.ಮೀ, ಯಶವಂತಪುರ-ಚನ್ನಸಂದ್ರ 21.70 ಕಿ.ಮೀ ಕಾಮಗಾರಿಗೆ ಅಸ್ತು.
* ಪಿಪಿಪಿ ಮಾದರಿಯಲ್ಲಿ ಉಪನಗರ ರೈಲು ಯೋಜನೆ ಅನುದಾನ ಕಡಿತಗೊಳಿಸಿ 15,767 ಕೋಟಿ ರೂ. ಯೋಜನೆಗೆ ತಾತ್ವಿಕ ಅನುಮೋದನೆ.
* ಕಾವೇರಿ ನೀರಾವರಿ ನಿಗಮಕ್ಕೆ ಶೇ 40% ಬಂಡವಾಳ ಮತ್ತು ರಾಜಸ್ವ ವೆಚ್ಚ ಮಾಡಲು ಅನುಮೋದನೆ
* ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು 40 ವರ್ಷ ಅವಧಿಗೆ ನಿರಾಣಿ ಶುಗರ್ಸ್ ಸಂಸ್ಥೆಗೆ 400 ಕೋಟಿ ರೂ.ಗೆ ಗುತ್ತಿಗೆ ನೀಡಲು ಅನುಮೋದನೆ
* ಕೋವಿಡ್ ಅವಧಿ ಮುಗಿಯುವವರೆಗೆ ಬೆಂಗಳೂರಿನಲ್ಲಿರುವ ಎಲ್ಲಾ 35 ಪಿಹೆಚ್ ಸಿ, 14 ಹೆಚ್ ಸಿಹೆಚ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡಲು ನಿರ್ಧಾರ.
Last Updated : Jun 25, 2020, 4:23 PM IST