ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಿರುವ ಸರ್ಕಾರ ಆಗಸ್ಟ್ 7ರಂದು ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಕಾಸಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಗುರಿ ನಿಗದಿ ಮಾಡಲಾಗುವುದು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಪ್ರಮಾಣದ ಬಗ್ಗೆ ಎ.ಟಿ.ರಾಮಸ್ವಾಮಿ ವರದಿ, ಬಾಲಸುಬ್ರಹ್ಮಣ್ಯ ವರದಿ ಸೇರಿದಂತೆ ಹಲವು ವರದಿಗಳು ನಮ್ಮ ಮುಂದಿವೆ. ಅದನ್ನು ಆಧಾರವಾಗಿಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು" ಎಂದು ಹೇಳಿದರು.
"ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದ ಒತ್ತುವರಿಯನ್ನು ತೆರವು ಮಾಡಲು ಗುರಿ ನಿಗದಿ ಮಾಡುವುದು ನಮ್ಮ ಯೋಚನೆ. ಈ ಸಂಬಂಧ ವಿಭಾಗ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸರಣಿ ಸಭೆಗಳನ್ನು ನಡೆಸಲಾಗುವುದು. ಆಗಸ್ಟ್ 7 ರ ಸೋಮವಾರ ನಡೆಯಲಿರುವ ಸಭೆಯ ನಂತರ ಮಂಗಳವಾರ ಮೈಸೂರು ವಿಭಾಗದ ಸಭೆಯನ್ನು ನಡೆಸಲಾಗುವುದು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವುದು ಮತ್ತು ತೆರವಾದ ಭೂಮಿಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಿದ ನಂತರ ರೆವೆನ್ಯೂ ಇನ್ಸ್ಪೆಕ್ಟರ್ಗಳು ಈ ಭೂಮಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಮರಳಿ ಈ ಭೂಮಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು" ಎಂದರು.
"ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಉಳಿದಂತೆ ರಾಜ್ಯದಾದ್ಯಂತ ಗಣನೀಯ ಪ್ರಮಾಣದ ಭೂಮಿ ಒತ್ತುವರಿಯಾಗಿದೆ. ಈ ಮಧ್ಯೆ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಭಾಗಶ: ಶಿವಮೊಗ್ಗ ಜಿಲ್ಲೆಗಳಲ್ಲಿ ಒತ್ತುವರಿ ಕಾಫಿ ಭೂಮಿಯನ್ನು ಗುತ್ತಿಗೆಗೆ ಕೊಡುವ ಸಂಬಂಧ ಹಿಂದಿನ ಸರ್ಕಾರ ಕೈಗೊಂಡ ತೀರ್ಮಾನವನ್ನು ಯಥಾವತ್ತಾಗಿ ಜಾರಿಗೊಳಿಸಲಾಗುವುದು" ಎಂದು ತಿಳಿಸಿದರು.