ಕರ್ನಾಟಕ

karnataka

By

Published : Jul 26, 2022, 1:24 PM IST

ETV Bharat / state

ಬಿಜೆಪಿಗೆ ಶಕ್ತಿ ಇಲ್ಲ ಎನ್ನುವವರಿಗೆ ಜನೋತ್ಸವ ಮೂಲಕ ಉತ್ತರ: ಸಚಿವ ಡಾ. ಕೆ. ಸುಧಾಕರ್‌

ಜು. 28ರಂದು ಬಿಜೆಪಿ ಸರ್ಕಾರಕ್ಕೆ 3 ವರ್ಷ - ಮೂರು ಜಿಲ್ಲೆಗಳಲ್ಲಿ ಬಿಜೆಪಿಗೆ ಶಕ್ತಿ ಇಲ್ಲ ಎನ್ನುವವರಿಗೆ ಜನೋತ್ಸವದಲ್ಲಿ ಉತ್ತರ- ಪ್ರತಿಪಕ್ಷಗಳಿಗೆ ಸಚಿವ ಸುಧಾಕರ್‌ ತಿರುಗೇಟು

minister k sudhakar
ಸಚಿವ ಡಾ.ಕೆ.ಸುಧಾಕರ್‌

ಬೆಂಗಳೂರು: ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿಗೆ ಶಕ್ತಿ ಇಲ್ಲ ಎಂದು ಹೇಳುವ ಬೇರೆ ಪಕ್ಷದ ನಾಯಕರಿಗೆ ಜುಲೈ 28 ರಂದು ನಡೆಯಲಿರುವ ಜನೋತ್ಸವ ಸಮಾವೇಶದಲ್ಲಿ ಉತ್ತರ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಜನರಿಂದ ಮೇಲೆ ಬಂದಿರುವ ಪಕ್ಷ. ಜನರಿಗೋಸ್ಕರ ಕೆಲಸ ಮಾಡುತ್ತಿದೆ. ಆಡಳಿತಕ್ಕೆ ಬಂದು 3 ವರ್ಷವಾಗಿದೆ. ಕೋವಿಡ್‌ ಕಾರಣದಿಂದ ಕಳೆದ 2 ವರ್ಷಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ನೆರವು ಪಡೆದ ಲಕ್ಷಾಂತರ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಪಕ್ಷ ಹಾಗೂ ಸರ್ಕಾರದ ಕಾರ್ಯ ವೈಖರಿಯನ್ನು ಮೆಚ್ಚಿ ಸಂದೇಶ ಕಳುಹಿಸಲಿದ್ದಾರೆ ಎಂದು ತಿಳಿಸಿದರು.

ಯಾವುದೇ ಒಂದು ಸಮುದಾಯದಿಂದ ಒಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಸಮುದಾಯದ ಒಟ್ಟಾರೆ ಅಭಿಪ್ರಾಯ ಇರಬೇಕು. ಉಳಿದ ಸಮುದಾಯಗಳ ವಿಶ್ವಾಸ ಗಳಿಸಬೇಕು. ಜನರ ನಾಯಕತ್ವದ ಮೇಲೆ ನಂಬಿಕೆ ಇಟ್ಟವರು ಮಾತ್ರ ಮುಖ್ಯಮಂತ್ರಿಯಾಗಬಹುದು. ಯಾವುದೇ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಸಚಿವರಾಗಿ ಅನುಭವ ಇದ್ದಂತಹ ಜಮೀರ್‌ ಅಹ್ಮದ್‌ರಿಂದ ಒಕ್ಕಲಿಗರಿಗೆ ನೋವಾಗುವಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ. ರಾಜಕಾರಣಿಗಳು ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದರು.

ಒಕ್ಕಲಿಗ ಸಮುದಾಯ ಕೃಷಿಕರ ಸಮುದಾಯ. ಕೃಷಿಕರು ದೇಶದ ಬೆನ್ನೆಲುಬು. ಈ ಸಮುದಾಯ ಎಲ್ಲಾ ಸಮುದಾಯಗಳ ಜೊತೆ ವಿಶ್ವಾಸ ಇಟ್ಟುಕೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದೆ. ಕಾಯಕವನ್ನೇ ನಂಬಿರುವ ಸಮುದಾಯವಿದು. ಶಾಸಕ ಜಮೀರ್‌ ಹೇಳಿಕೆಯಿಂದ ಅವರಿಗೆ ಹಾಗೂ ಅವರ ಪಕ್ಷಕ್ಕೆ ಹೆಚ್ಚು ನಷ್ಟವಾಗುತ್ತದೆ ಎಂದು ಸಚಿವ ಸುಧಾಕರ್​ ತಿಳಿಸಿದರು.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿಚಾರಣೆ ವೇಳೆ ಬಾಯಿ ಬಡಿದುಕೊಂಡರೂ ಪ್ರಯೋಜನ ಆಗಲಿಲ್ಲ. ಈಗ ಮೌನಕ್ಕೆ ಶರಣಾಗಿದ್ದಾರೆ. 54 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್‌ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ವಾ? ಆಗ ಎಲ್ಲವೂ ಸರಿ ಇತ್ತು ಎನ್ನುವವರು ಈಗೇಕೆ ಸಂದೇಹ ಪಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರನ್ನು ಡಾ. ಸುಧಾಕರ್​ ಪ್ರಶ್ನಿಸಿದರು.

ಇದನ್ನೂ ಓದಿ:ಮೈಸೂರಿನ ರಾಜಮಾತೆ ಆಕ್ಷೇಪ.. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಒಂದೇ ದಿನಕ್ಕೆ ಅಂತ್ಯ

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಗಳಾಗಿದ್ದಾಗಲೇ 8-10 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು. ಅಮಿತ್‌ ಶಾ ಅವರನ್ನು ಗಡಿಪಾರು ಮಾಡಲಾಗಿತ್ತು. ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನು ಜನರು ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರು ಮಾತ್ರ ತನಿಖೆ, ವಿಚಾರಣೆಗೆ ಸಹಕರಿಸುತ್ತಾರೆ. ಒಂದು ವೇಳೆ ನ್ಯಾಯ ಸಿಕ್ಕಿಲ್ಲ ಎಂದರೆ ಕೋರ್ಟ್‌ ವ್ಯವಸ್ಥೆ ನಮ್ಮ ದೇಶದಲ್ಲಿದೆ ಎಂದು ಕಾಂಗ್ರೆಸ್‌ ಪ್ರತಿಭಟನೆಯ ಬಗ್ಗೆ ಕಿಡಿಕಾರಿದರು.

ABOUT THE AUTHOR

...view details