ಬೆಂಗಳೂರು :ಒಮಿಕ್ರಾನ್ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಏಕರೂಪ ಚಿಕಿತ್ಸಾ ಪ್ರೋಟೋಕಾಲ್ ಸಿದ್ಧಪಡಿಸಲು ಹಿರಿಯ ವೈರಾಣು ತಜ್ಞ ಡಾ. ಕೆ.ರವಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ವೈರಾಣು ತಜ್ಞ ಡಾ.ರವಿ ನೇತೃತ್ವದಲ್ಲಿ 10 ಜನ ಪರಿಣಿತರ ನೇಮಕ ಮಾಡಿದ್ದೇವೆ.
ಹೊಸ ಪ್ರಭೇದದಲ್ಲಿ ತೊಂದರೆಯಾದರೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಪ್ರೋಟೋಕಾಲ್ ಸಿದ್ಧಪಡಿಸಲಿದ್ದಾರೆ. ಆ ಚಿಕಿತ್ಸಾ ಪ್ರೋಟೋಕಾಲ್ ರಾಜ್ಯಾದ್ಯಂತ ಅನ್ವಯವಾಗಲಿದೆ ಎಂದು ತಿಳಿಸಿದರು.
ಒಮಿಕ್ರಾನ್ ರೂಪಾಂತರಿ ವೈರಸ್ ಕುರಿತಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿರುವುದು.. ಆರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿದ್ದೇವೆ. ಸಿಎಂ ಸಲಹೆ ಪೂರಕವಾಗಿ ಅವರ ಸಭೆ ಆಗಿದೆ. ಅನೇಕ ದೇಶಗಳಲ್ಲಿ ಒಮಿಕ್ರಾನ್ ಪ್ರಭೇದ ಬಂದಿದೆ, ಅದನ್ನು ನಿಯಂತ್ರಣ ಮಾಡಬೇಕು.
ಅಕಸ್ಮಾತ್ ಬಂದರೆ ನಮ್ಮ ಜಾಗೃತೆ ಸಿದ್ದತೆ ಹೇಗಿರಬೇಕು ಅಂತಾ ಹೆಚ್ಚು ಸಮಯ ವಿನಿಯೋಗ ಮಾಡಿದ್ದೇವೆ. ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ಸಂಸ್ಥೆ, ಖಾಸಗಿ ಆಸ್ಪತ್ರೆ ಸಿದ್ದತೆ ಬಗ್ಗೆ ಚರ್ಚೆ ಆಗಿದೆ.
ಅನೇಕ ತಂತ್ರಜ್ಞಾನ ಬಳಸಿ ಕ್ವಾರಂಟೈನ್ ಆ್ಯಪ್ ಮಾಡಿದ್ದೇವೆ. ವಿದೇಶಿ ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಆರ್‌ಟಿಪಿಸಿಆರ್ ಕಡ್ಡಾಯ ಮಾಡಿದ್ದೇವೆ. 2,500 ಜನರಿಗೆ ಪ್ರತಿನಿತ್ಯ ಕಡ್ಡಾಯ ಟೆಸ್ಟ್ ಗೊಳಗಾಗಬೇಕು.
ವಿದೇಶಿ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಕ್ವಾರೆಂಟೈನ್ ಆಗಲಿದೆ. ರೋಗ ಲಕ್ಷಣ ಇದ್ದರೆ 5ನೇ ದಿನ ಆರ್‌ಟಿಪಿಸಿಆರ್, ರೋಗ ಲಕ್ಷಣ ಇಲ್ಲದಿದ್ದರೆ 7ನೇ ದಿನ ಟೆಸ್ಟಿಂಗ್ ಮಾಡಿಸಬೇಕು ಎಂದು ತಿಳಿಸಿದರು.
ಔಷಧ ದಾಸ್ತಾನು ಹೇಗಿರಬೇಕು, ಎಲ್ಲಿ ಇಡಬೇಕು ಎಂದು ಪರಿಶೀಲನೆ ಮಾಡಿದ್ದೇವೆ. 41 ಲಕ್ಷ ಎರಡನೇ ಡೋಸ್ ಲಸಿಕೆ ಪಡೆಯದವರು ಇದ್ದಾರೆ. ಇಷ್ಟು ಜನರಿಗೆ ಲಸಿಕೆ ಕೊಡುವುದಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಇದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಅಂತಾ ಸಿಎಂ ಕೂಡ ಹೇಳಿದ್ದಾರೆ ಎಂದು ತಿಳುಸಿದರು.
ತಾಂತ್ರಿಕ ಸಲಹಾ ಸಮಿತಿಯವರು ಹಲವು ಸಲಹೆಗಳನ್ನು ನೀಡಿದ್ದಾರೆ. ಲಸಿಕೆ ಎರಡು ಡೋಸ್ ಆಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಾರದು ಎಂಬ ಮಾತನ್ನೂ ಹೇಳಿದ್ದಾರೆ. ಆದರೆ, ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಯಾರನ್ನೂ ಬಲವಂತವಾಗಿ ಲಸಿಕೆ ಹಾಕಿಸುವ ಇಚ್ಚೆ ಸರ್ಕಾರಕ್ಕೂ ಇಲ್ಲ. ಒಮಿಕ್ರಾನ್ ಹರಡುವ ಪ್ರಮಾಣ ಜಾಸ್ತಿ ಇದೆ. ಆದರೆ, ತೀವ್ರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಜನರಿಗೂ ಈ ಬಗ್ಗೆ ಕೂಡ ಮನವಿ ಮಾಡುತ್ತೇನೆ. ವ್ಯಾಕ್ಸಿನ್ ತಪ್ಪದೆ ತೆಗೆದುಕೊಳ್ಳಿ ಎಂದು ಕರೆ ನೀಡಿದರು.
ಬೆಳಗಾವಿ ಸೆಷನ್ ನಡೆಸುವ ಬಗ್ಗೆನೂ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಸಿಎಂ ಬಳಿ ಚರ್ಚಿಸಿ ನಿರ್ಧಾರ ತೆಗದುಕೊಳ್ಳುತ್ತೇವೆ. ದೆಹಲಿಯಲ್ಲಿ ಅಧಿವೇಶನ ನಡೆಯುತ್ತಿದೆ. ಅಲ್ಲಿ ಸಾವಿರಾರು ಮಂದಿ ವಿದೇಶಿಗರು ಬರುತ್ತಾರೆ.
ಹಾಗಾಗಿ, ವಿಧಾನ ಮಂಡಲ ಅಧಿವೇಶನ ನಡೆಸಲು ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಅದನ್ನು ಸಿಎಂ ಬಳಿ ಚರ್ಚಿಸುತ್ತೇವೆ ಎಂದರು.