ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮಾಯಕರಲ್ಲ. ಅವರು ಅಮಾಯಕರಾಗಿದ್ದರೆ ತಲಾ ಶೇ.38 ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರ್ಯಕರ್ತರನ್ನು ಸೇರಿಸಿ ಪ್ರತಿಭಟನೆ ಮಾಡಿಸುವ ಮೂಲಕ ಈ ಕೇಸ್ನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸೋನಿಯಾ ಗಾಂಧಿಯವರಿಗೆ ಇ.ಡಿ. ನೋಟಿಸ್ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿರುವುದರ ಕುರಿತು ಪ್ರತಿಕ್ರಿಯಿಸಿದರು. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಸಂಬಂಧಿಸಿದಂತೆ ಆಗಿರುವ ಅವ್ಯವಹಾರಕ್ಕೆ ಇ.ಡಿ. ನೋಟಿಸ್ ನೀಡಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ನಡೆದುಕೊಂಡ ಕಾರಣ ನೋಟಿಸ್ ಕೊಟ್ಟಿದೆ. ಅವರು ಪ್ರಾಮಾಣಿಕರಿದ್ದರೆ ಇ.ಡಿ.ಗೆ ಯಾಕೆ ಹೆದರಬೇಕು? ಭ್ರಷ್ಟಾಚಾರ ಮಾಡಿದ್ದರೆ ಅವರನ್ನು ಹಾಗೇ ಬಿಡಬೇಕೆಂದು ಕಾಂಗ್ರೆಸ್‍ನವರು ಬಯಸುತ್ತಾರೆಯೇ? ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲೇ ಕಾಂಗ್ರೆಸ್ ವಿರುದ್ಧ ತನಿಖೆ ಬೇಡ ಎಂದು ಸೇರಿಸಬೇಕಿತ್ತು: ಸಂವಿಧಾನ ರಚನೆ ಸಂದರ್ಭದಲ್ಲಿ ಅವತ್ತು ಕಾಂಗ್ರೆಸ್ಸಿಗರಿಗೆ ಪ್ರಭಾವ ಇತ್ತು. ಆಗ, ಕಾಂಗ್ರೆಸ್‍ನವರು ಭ್ರಷ್ಟಾಚಾರ ಮಾಡಿದರೆ ಪ್ರಶ್ನಿಸುವಂತಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಬಹುದಿತ್ತು. ಇಷ್ಟಾಗಿಯೂ ತನಿಖೆ ನಡೆಸಿದ್ದರೆ ಅದು ಸಂವಿಧಾನ ವಿರೋಧಿ ಆಗುತ್ತಿತ್ತು. ಈಗ ತನಿಖೆ ನಡೆಸುವುದು ಸಂವಿಧಾನಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.
ಸೋನಿಯಾ ಗಾಂಧಿ ಮತ್ತಿತರರು ಜೈಲಿಗೆ ಹೋಗಲಿದ್ದಾರೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ನಿರ್ಧರಿಸಬೇಕು. ನ್ಯಾಯಾಲಯ ಈ ಕುರಿತು ತಿಳಿಸಬೇಕು. ಜೈಲಿಗೆ ಕಳುಹಿಸುವ ಅಧಿಕಾರ ನನಗಿಲ್ಲ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮಾಯಕರಲ್ಲ. ಅಮಾಯಕರಾಗಿದ್ದರೆ ಅವರು ತಲಾ 38 ಶೇಕಡಾ ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸುತ್ತಿರಲಿಲ್ಲ ಎಂದು ಸಿ ಟಿ ರವಿ ಹೇಳಿದರು.