ಬೆಂಗಳೂರು:ನಕಲಿ ವೋಟರ್ ಐಡಿ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟವರು ನನ್ನ ಆಪ್ತರಲ್ಲ ಎಂದು ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಮತದಾರರ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರಗಳನ್ನು ತಯಾರಿಸಿ ಕೊಡುತ್ತಿದ್ದ ಆರೋಪದಲ್ಲಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಚಿವ ಭೈರತಿ ಸುರೇಶ್ ಆಪ್ತ ಎನ್ನಲಾಗುತ್ತಿರುವ ಆರೋಪಿ ಮೌನೇಶ್ ಕುಮಾರ್ ಹಣ ನೀಡಿದರೆ ವೋಟರ್ ಐಡಿ, ಆಧಾರ್, ಡಿಎಲ್ ಮಾಡಿಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ನಕಲಿ ವೋಟರ್ ಐಡಿ ಸೃಷ್ಟಿ ಸಂಬಂಧ ಸಿಸಿಬಿ ಪೊಲೀಸರು ಮೌನೇಶ್ ಕುಮಾರ್ ಸಹಚರರಾದ ಭಗತ್ ಮತ್ತು ರಾಘವೇಂದ್ರ ಎಂಬವರನ್ನು ಬಂಧಿಸಿದ್ದಾರೆ. ಆರೋಪಿ ಮೌನೇಶ್ ಸಚಿವ ಭೈರತಿ ಸುರೇಶ್ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಭೈರತಿ ಸುರೇಶ್, ''ಅನೇಕ ಜನರು ಬಂದು ಫೋಟೊ ತೆಗೆದುಕೊಂಡು ಹೋಗ್ತಾರೆ. ಆಸ್ಪತ್ರೆ ಬಳಿ ಹೋಗಿದ್ದೆ ಅಲ್ಲೂ ಫೋಟೋ ತೆಗೆದುಕೊಂಡ್ರು. ಒಂದು ಸಾವಿಗೆ ಹೋಗಿ ಬಂದೆ, ಫೋಟೋ ತೆಗೆಸಿಕೊಂಡ್ರು. ನೂರಾರು ಜನರ ಜೊತೆ ಫೋಟೋ ಹಿಡಿಸಿಕೊಂಡಿದ್ದೇನೆ. ಸಾವಿರಾರು ಜನರ ಜೊತೆ ಫೋಟೋ ಇದೆ. ಅವರೆಲ್ಲ ತಪ್ಪು ಮಾಡಿದ್ರೆ ನಾನು ಕಾರಣಾನಾ?'' ಎಂದು ಪ್ರಶ್ನಿಸಿದ್ದಾರೆ.
''ರಾಜ್ಯದ ಪೊಲೀಸ್ ಎಲ್ಲರೂ ನಮ್ಮವರೇ. ನ್ಯಾಯಯುತ ತನಿಖೆ ನಡೆಸಲಿ. ನನಗೆ 6 ಕೋಟಿ ಜನರು ಗೊತ್ತು. ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನನ್ನ ಆಪ್ತರು ಅನ್ನೋದು ಸರಿಯಲ್ಲ. ನಿತ್ಯ ನೂರಾರು ಜನ ನನ್ನ ಬಳಿ ಫೋಟೋ ತೆಗೆಸಿಕೊಳ್ತಾರೆ. ಯಾರೇ ತಪ್ಪಿತಸ್ಥರು ಆಗಲಿ, ಕಾನೂನು ಇದೆ. ಅದರ ಪ್ರಕಾರ ತನಿಖೆ ಆಗಲಿ. ನನಗೆ ಬೇಕಾದವರು ಆಗಿದ್ದರೆ ಎಪ್ಐಆರ್ ಯಾಕೆ ಮಾಡಬೇಕಿತ್ತು. ಹಾಗೇ ಬಿಡಬಹುದಿತ್ತು ಅಲ್ವೆ?'' ಎಂದಿದ್ದಾರೆ.