ಬೆಂಗಳೂರು: ಇಂದಿನಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಆರಂಭವಾದ ಹಿನ್ನೆಲೆ ನಗರದ ಮಾಗಡಿ ರಸ್ತೆ ಅಗ್ರಹಾರ ದಾಸರಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಶಿಕ್ಷಣ ಸಚಿವ ನಾಗೇಶ್ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯಿರಿ ಅಂತಾ ವಿಶ್ವಾಸದ ಮಾತುಗಳನ್ನಾಡಿ, ರೆಡ್ ರೋಸ್ ಕೊಟ್ಟು ವಿಶ್ ಮಾಡಿದರು. ಇನ್ನೊಂದೆಡೆ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಸ್ಯಾನಿಟೈಸರ್, ಮಾಸ್ಕ್ ಮತ್ತು ಪೆನ್ನುಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪರೀಕ್ಷಾ ಕೇಂದ್ರಗಳ ಭೇಟಿ ಬಳಿಕ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯಿಸಿ, ಎರಡು ವರ್ಷಗಳ ಕಾಲ ಕೋವಿಡ್ ಕಾರಣಕ್ಕೆ ಸೂಕ್ತವಾಗಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಈ ಬಾರಿ ಬಹಳ ಸಿದ್ಧತೆಯೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಬಹಳ ಕಡೆ ನಾಲ್ಕೈದು ಬಾರಿ ಸಿದ್ಧತಾ ಪರೀಕ್ಷೆ ನಡೆಸಲಾಗಿದೆ. ಅಗ್ರಹಾರ ದಾಸರಳ್ಳಿಯಲ್ಲಿ 25 ಶಾಲೆಗಳ ಮಕ್ಕಳು ಆಗಮಿಸಿದ್ದು, ಒಂದು ಮಗು ಮಾತ್ರ ಪರೀಕ್ಷಾ ಕೇಂದ್ರಕ್ಕೆ ಇನ್ನೂ ಬಂದಿಲ್ಲ ಎಂದರು.
ಹಿಜಾಬ್ ವಿಚಾರವಾಗಿ ಮಾತಾನಾಡಿದ ಅವರು, ಒಂದು ವ್ಯವಸ್ಥೆ ಮುನ್ನಡೆಸಬೇಕಾದರೆ ಕೆಲವು ರೀತಿ ರಿವಾಜುಗಳು ಇರುತ್ತವೆ. ಕಾನೂನು ಪ್ರಕಾರ ನಡೆದುಕೊಳ್ಳಬೇಕಾಗುತ್ತೆ. ಹೀಗಾಗಿ, ಕೆಲವು ಮಕ್ಕಳ ಹಿತಾಸಕ್ತಿಗೆ ಅನುಗುಣವಾಗಿ ನಾವು ರೂಲ್ಸ್ ಮಾಡೋಕೆ ಆಗಲ್ಲ. ಈಗಾಗಲೇ ಹೈಕೋರ್ಟ್ ಆದೇಶ ಹೊರಡಿಸಿದೆ. ಅದನ್ನು ಪಾಲಿಸಬೇಕು ಎಂದರು.
ಸಿದ್ದರಾಮಯ್ಯ ಪತ್ರ ವಿಚಾರವಾಗಿ ಮಾತಾನಾಡಿದ ಅವರು, ಕೆಲವು ಒತ್ತಡಗಳಿಗೆ ಒಳಗಾಗಿ ಕೆಲವು ವಿಚಾರ ಹೇಳಿದ್ದಾರೆ. ಜಮೀರ್, ಖಾದರ್ ಹೇಳಿಕೊಟ್ಟಿದ್ದಕ್ಕೆ ಮಾತನಾಡಿದ್ದಾರಷ್ಟೇ, ಅದರ ಬಗ್ಗೆ ಯೋಚನೆ ಮಾಡುತ್ತೇನೆ. ಈ ಬಾರಿ ಪಠ್ಯ ಪುಸ್ತಕ ಪರಿಷ್ಕರಣೆ ವಿಸ್ತೃತವಾಗಿ ನಡೆಸಲಾಗಿದೆ. ಪಠ್ಯ ಪುಸ್ತಕದ ಪರಿಷ್ಕರಣೆ ಸಮಿತಿ ತನ್ನ ವರದಿ ಸಲ್ಲಿಸಿದ ಮೇಲೆ ಸರ್ಕಾರ ಆರ್ಡರ್ ಮಾಡಿದ ನಂತರವೇ ಮುದ್ರಣಕ್ಕೆ ಹೋಗಲಿದೆ ಅಂದರು.