ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ. ಮಲ್ಲೇಶ್ವರದ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ ಆಧಾರದ ಮೇರೆಗೆ ಅನುತ್ತೀರ್ಣ ವಿಷಯಗಳಿಗೆ ನಿಯಮಾನುಸಾರ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳಲಾಗುವುದು.
ಅನುತ್ತೀರ್ಣ ಎಂಸಿಎಗಳು ಕಾಲೇಜಿಗೆ ತಲುಪಿದ ಕೂಡಲೇ ಶುಲ್ಕ ಕಟ್ಟಿದ ಅಭ್ಯರ್ಥಿಗಳ ಎಂಸಿಎಗಳನ್ನು ಭರ್ತಿ ಮಾಡಿ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವುದು. 2021ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ ಓಎಂಆರ್/ಅನುತ್ತೀರ್ಣ ಅರ್ಜಿ ಅಥವಾ ಹಿಂದಿನ ಎಂಸಿಎಗಳ ಆಧಾರದ ಮೇಲೆ ಪರೀಕ್ಷೆಗಳಿಗೆ ಶುಲ್ಕ ಕಟ್ಟಿಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಮರು ಪರೀಕ್ಷೆ :ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿಯಮಾನುಸಾರ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದಲ್ಲಿ, ಮೂಲ ಅನುತ್ತೀರ್ಣ ಓಎಂಆರ್ಗಳನ್ನು ಪಡೆದುಕೊಂಡ ನಂತರವೇ ಕ್ರಮವಹಿಸುವುದು, ಫಲಿತಾಂಶ ತಿರಸ್ಕರಣೆ ಅರ್ಜಿಯ ಹಿಂಬದಿಯಲ್ಲಿನ ಸೂಚನೆಗಳನ್ನು ಗಮನಿಸಬೇಕು.
2021ರ ದ್ವಿತೀಯ ಪಿಯುಸಿ ವಾರ್ಷಿಕ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ 2022ರ ಪೂರಕ ಪರೀಕ್ಷೆ ಬರೆಯಲು ಇಚ್ಛಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಗಳ (Original Marks card) ಆಧಾರದ ಮೇಲೆ ನಿಯಮಾನುಸಾರ ಫಲಿತಾಂಶ ತಿರಸ್ಕರಣೆಗೆ ಅವಕಾಶ ನೀಡಲಾಗುವುದು. ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ವೆಬ್‌ಸೈಟ್ www.karresults.nic.in ಸಂಪರ್ಕಿಸಬಹುದು. ಇಲಾಖೆಯ ಸಹಾಯವಾಣಿ ದೂರವಾಣಿ ಸಂಖ್ಯೆ: 080- 23083860/23083864 ಎಂದು ವಿವರಿಸಿದರು.
ಜಾತಿ ಮತ್ತು ವರ್ಗವಾರು ಫಲಿತಾಂಶವನ್ನು ಗಮನಿಸಿದಾಗ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.49.76, ಪರಿಶಿಷ್ಟ ಪಂಗಡ-ಶೇ.51.82, ಸಿ-1 ಶೇ.61.07, 2ಎ- ಶೇ.67.47, 2ಬಿ- ಶೇ.57.44, 3ಎ- ಶೇ.70.43, 3ಬಿ-ಶೇ.68.55 ಹಾಗೂ ಸಾಮಾನ್ಯ ವರ್ಗ-ಶೇ.65.82 ಪರೀಕ್ಷೆಗೆ ಹಾಜರಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಶೇ-51.38ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶೇ.69.99ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ.
ನೂರಕ್ಕೆ ನೂರು :ವಿಷಯವಾರು ನೂರಕ್ಕೆ ನೂರು ಅಂಕಗಳಿಸಿರುವ ವಿದ್ಯಾರ್ಥಿಗಳ ವಿವರ ನೀಡಿದ ಸಚಿವರು, ಕನ್ನಡದಲ್ಲಿ 563, ಇಂಗ್ಲಿಷ್ನಲ್ಲಿ ಇಬ್ಬರು, ಹಿಂದಿಯಲ್ಲಿ 124, ಮಲಯಾಳಂ ಹಾಗೂ ಉರ್ದುನಲ್ಲಿ ತಲಾ 4, ಸಂಸ್ಕೃತದಲ್ಲಿ 1919, ಫ್ರೆಂಚ್ ಭಾಷೆಯಲ್ಲಿ 32, ಐಚ್ಛಿಕ ಕನ್ನಡದಲ್ಲಿ 18, ಇತಿಹಾಸದಲ್ಲಿ 166, ಅರ್ಥಶಾಸ್ತ್ರದಲ್ಲಿ 1,472, ತರ್ಕಶಾಸ್ತ್ರದಲ್ಲಿ 26, ಭೂಗೋಳಶಾಸ್ತ್ರದಲ್ಲಿ 587, ಹಿಂದುಸ್ತಾನಿ ಸಂಗೀತದಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 2,837, ಸಮಾಜಶಾಸ್ತ್ರದಲ್ಲಿ 85, ಲೆಕ್ಕಶಾಸ್ತ್ರದಲ್ಲಿ 3,460, ಭೂಗರ್ಭಶಾಸ್ತ್ರದಲ್ಲಿ 5, ಸಂಖ್ಯಾಶಾಸ್ತ್ರದಲ್ಲಿ 2,266, ಮನಶಾಸ್ತ್ರದಲ್ಲಿ 81, ಭೌತಶಾಸ್ತ್ರದಲ್ಲಿ 36, ರಸಾಯನಶಾಸ್ತ್ರದಲ್ಲಿ 2,917, ಗಣಿತಶಾಸ್ತ್ರದಲ್ಲಿ 14,210, ಜೀವಶಾಸ್ತ್ರದಲ್ಲಿ 2,106, ಎಲೆಕ್ಟ್ರಾನಿಕ್ಸ್ ನಲ್ಲಿ 236, ಗಣಕವಿಜ್ಞಾನ 4,868, ಶಿಕ್ಷಣದಲ್ಲಿ 658, ಬೇಸಿಕ್ ಗಣಿತದಲ್ಲಿ 401, ಮಾಹಿತಿ ತಂತ್ರಜ್ಞಾನದಲ್ಲಿ 17, ಆಟೋಮೊಬೈಲ್ನಲ್ಲಿ 20 ಹಾಗೂ ಗೃಹವಿಜ್ಞಾನದಲ್ಲಿ 12 ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆಂದು ಮಾಹಿತಿ ನೀಡಿದರು.
ಪರೀಕ್ಷೆಗೆ ಹಾಜರು :ಸರ್ಕಾರಿ ಪದವಿ ಪೂರ್ವ ಕಾಲೇಜು-ಶೇ.52.84, ಅನುದಾನಿತ ಪದವಿ ಪೂರ್ವ ಕಾಲೇಜು-ಶೇ.62.05, ಅನುದಾನರಹಿತ ಪದವಿಪೂರ್ವ ಕಾಲೇಜು-ಶೇ.76.50, ಕಾರ್ಪೊರೇಷನ್ ಪದವಿಪೂರ್ವ ಕಾಲೇಜು-ಶೇ.55.72 ಹಾಗೂ ವಿಭಜಿತ ಪದವಿ ಪೂರ್ವ ಕಾಲೇಜು- ಶೇ.72.96ರಷ್ಟು ಫಲಿತಾಂಶ ಪಡೆದಿದೆ. ಒಟ್ಟಾರೆ ಶೇ.67.13ರಷ್ಟು ಉತ್ತೀರ್ಣತೆ ದಾಖಲಾಗಿದೆ.