ಬೆಂಗಳೂರು:ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆ. 28, 29 ಮತ್ತು 30ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಸಚಿವ ಅಶ್ವತ್ಥನಾರಾಯಣ ಇಂದು ಪ್ರಕಟಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಸಚಿವ ಅಶ್ವತ್ಥ ನಾರಾಯಣ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 2,01,834 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,93,447 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕೋವಿಡ್ ಪಾಸಿಟಿವ್ ಇದ್ದ 12 ಅಭ್ಯರ್ಥಿಗಳು ಕೂಡ ಹಾಜರಾಗಿ ಪರೀಕ್ಷೆ ಬರೆದಿದ್ದರು ಎಂದು ತಿಳಿಸಿದರು.
ಫಲಿತಾಂಶ ಇಲ್ಲಿ ಸಿಗುತ್ತೆ..
ಫಲಿತಾಂಶವು ಇಂದು 4 ಗಂಟೆಗೆ ಪ್ರಾಧಿಕಾರದ ವೆಬ್ಸೈಟ್ kea.Kar.nic.in ಹಾಗೂ karresults.nic.in ಫಲಿತಾಂಶ ಪ್ರಕಟವಾಗಲಿದೆ.
ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ಇಂಜಿನಿಯರಿಂಗ್ ಕೋರ್ಸಿಗೆ 1,83,231 ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸಿಗೆ 1,52,518 ಹಾಗೂ ಪಶುಸಂಗೋಪನೆ 1,55,760, ಯೋಗ ಮತ್ತು ನ್ಯಾಚುರೋಪತಿ 1,55,910 ಮತ್ತು ಬಿ. ಫಾರ್ಮ ಕೋರ್ಸಿಗೆ- ಫಾರ್ಮ- ಡಿ ಕೋರ್ಸಿಗೆ 1,86,638 ಮಂದಿ ಅರ್ಹತೆ ಪಡೆದಿದ್ದಾರೆ.
ರ್ಯಾಂಕ್ ತಡೆ ಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಖುದ್ದಾಗಿ ಸಲ್ಲಿಸಿ ತಮ್ಮ ರ್ಯಾಂಕ್ ಪಡೆಯಬಹುದಾಗಿದೆ. ರ್ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆ ಪರಿಗಣಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
ದಾಖಲಾತಿ ಪರಿಶೀಲನೆ: ಸೌಲಭ್ಯ ಕೇಂದ್ರ ಸ್ಥಾಪನೆ
ಈ ತಿಂಗಳ 30ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ನಡೆಯಲಿದ್ದು, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗುತ್ತದೆ. ಅಭ್ಯರ್ಥಿಗಳು ಹತ್ತಿರದ ಸೌಲಭ್ಯ ಕೇಂದ್ರಗಳಿಗೆ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. UGNEET-2021 ರ ಫಲಿತಾಂಶ ಬಂದ ನಂತರ UGNET- 2021 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ಹಾಗೆಯೇ NATA-2021 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕೆ ರ್ಯಾಂಕ್ ಅನ್ನು ನಂತರ ಪ್ರಕಟಿಸಲಾಗುವುದು ಎಂದರು.
ಮೈಸೂರಿನ ಮೇಘನ್ ಹೆಚ್.ಕೆ.ಪ್ರಥಮ:
ಮೈಸೂರಿನ ಪ್ರಮಾತಿ ವಿವ್ಯೂ ಅಕಾಡೆಮಿಯ ಮೇಘನ್ ಹೆಚ್.ಕೆ ಎಂಬ ವಿದ್ಯಾರ್ಥಿ ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿಂಗ್, ಆಗ್ರಿಕ್ಚರ್, ಪಶುಸಂಗೋಪನೆ, ಬಿ ಫಾರ್ಮಾ, ಯೋಗ ನ್ಯಾಚುರೋಪತಿಯಲ್ಲೂ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.