ಬೆಂಗಳೂರು: ಹಿಜಾಬ್ ವಿವಾದ ಹುಟ್ಟುಹಾಕಿದ್ದು ಬಿಜೆಪಿಯವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕಂದಾಯ ಸಚಿವ ಆರ್.ಅಶೋಕ್, ಸಿದ್ದರಾಮಯ್ಯ ಅವರು ಒಬ್ಬ ಅನುಭವಿ ರಾಜಕಾರಣಿ. ಯಾವ ಸಮಯದಲ್ಲಿ ಯಾವ ಹೇಳಿಕೆ ನೀಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ ಮಠಕ್ಕೆ ಭೇಟಿ ನೀಡಿದಾಗ, ನೀವು ಯಾಕೆ ಶಾಲು ಮತ್ತು ಪೇಟ ಧರಿಸಿದೀರಾ ಎಂದು ಸ್ವಾಮೀಜಿಗಳಿಗೆ ಖುದ್ದಾಗಿ ಕೇಳಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ನ ಹಲವು ನಾಯಕರು ಮಠಗಳಿಗೆ ಭೇಟಿ ನೀಡುತ್ತಾರೆ. ಮಠಕ್ಕೆ ಭೇಟಿ ನೀಡಿದಾಗಲೇ ಸ್ವಾಮೀಜಿಗಳಿಗೇ ಕೇಳಬೇಕು.. ನೀವ್ಯಾಕೆ ಶಾಲು ಹಾಕಿಕೊಳ್ತಿರಾ? ಪೇಟ ಹಾಕ್ತಿರಾ ಎಂದು..?. ಮಠದಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರು ಸೈಲೆಂಟ್ ಆಗುತ್ತಾರೆ. ಹೊರಗಡೆ ಬಂದ ಮೇಲೆ ವೈಲೆಂಟ್ ಆಗುತ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ : ಭೂ ಒಡೆತನದಲ್ಲಿ ಅಕ್ರಮವೆಸಗಿದ್ರೆ ಕ್ರಿಮಿನಲ್ ಕೇಸ್ : ಕೋಟ ಶ್ರೀನಿವಾಸ ಪೂಜಾರಿ
ಹಿಜಾಬ್ ಘಟನೆ ನಮ್ಮ ರಾಜ್ಯದಲ್ಲಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಚರ್ಚೆಯಾಗಿದೆ. ಹಿಜಾಬ್ ಬಗ್ಗೆ ಕೇವಲ 6 ಜನ ಹೆಣ್ಣು ಮಕ್ಕಳು ಮಾತನಾಡಿದ್ರು. ಅವರಿಗೆ ಬೆಂಬಲ ನೀಡಿದ್ದು ಕಾಂಗ್ರೆಸ್. ಹಿಜಾಬ್ ಹಾಕಬೇಕೆಂದು ಹೇಳಿದ್ದವರೇ ಕಾಂಗ್ರೆಸ್‌ನವರು. ಇವಾಗ ಕೋರ್ಟ್ ತೀರ್ಪು ಬಂದ ಮೇಲೆ ಕಾಂಗ್ರೆಸ್ಗೆ ಸಂವಿಧಾನದ ವಿರುದ್ಧ ಹೋಗುವುದಕ್ಕೆ ಆಗುತ್ತಿಲ್ಲ. ಅದಕ್ಕಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಹಿಜಾಬ್ ಪ್ರಕರಣದ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದರು.
ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ಯಾವತ್ತೂ ಮಾತನಾಡುವುದಿಲ್ಲ. ಡಿಜೆಹಳ್ಳಿ, ಕೆಜಿಹಳ್ಳಿ ಗಲಾಟೆ ಬಗ್ಗೆ ಯಾರಾದ್ರು ಕಾಂಗ್ರೆಸ್ ನಾಯಕರು ಮಾತಾಡಿದ್ರಾ?. ಅವರ ಶಾಸಕರಿಗೆ ಹೊಡೆದ್ರು, ಅವರ ಮನೆ ಸುಟ್ಟು ಹಾಕಿದ್ರು. ಈ ಘಟನೆ ಹಿಂದೆ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇತ್ತು. ಯಾರಾದರು ಸಂಪತ್ ರಾಜ್ ಬಗ್ಗೆ ಮಾತನಾಡಿದ್ರಾ?. ಅಲ್ಪಸಂಖ್ಯಾತರ ವೋಟ್ ಇವರಿಗೆ ಬೇಕು. ಅದಕ್ಕಾಗಿಯೇ ಕಾಂಗ್ರೆಸ್‌ನವರು ಓಲೈಕೆ ಮಾಡಿ ವೋಟ್ ಕೇಳುತ್ತಾರೆ. ಆದರೆ, ನಾವು ಅಭಿವೃದ್ಧಿ ಮಾಡಿರುವುದನ್ನು ತೋರಿಸಿ ವೋಟ್ ಕೇಳುತ್ತೇವೆ ಎಂದು ಹೇಳಿದರು.