ಬೆಂಗಳೂರು: ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಯಾವ ಸರ್ಕಾರ ಈ ಹಿಂದೆ ಫೋನ್ ಟ್ಯಾಪ್ ಮಾಡಿತ್ತೋ ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯ ತಂದಿದೆ. ಇದು ಒಂದು ರೀತಿಯ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಕಾಣಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಈ ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಈ ಹಿಂದಿನ ಸರ್ಕಾರದ ಫೋನ್ ಟ್ಯಾಪ್ ತನಿಖೆ ಒಂದು ಹಂತಕ್ಕೆ ಬರುತ್ತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ತರದ ಸಂಸ್ಕೃತಿಯಿಂದ ಬಂದವರಲ್ಲ. ಅವರ ತಂದೆ ಸಿಎಂ ಆಗಿ ಕೆಲಸ ಮಾಡಿದವರು. ಫೋನ್ ಟ್ಯಾಪಿಂಗ್ ಸಂಸ್ಕೃತಿ ಕಾಂಗ್ರೆಸ್ನವರದ್ದು. ಅವರಿಗೆ ಇದರಲ್ಲಿ ಅನುಭವ ಇದೆ. ಫೋನ್ ಟ್ಯಾಪಿಂಗ್ ಮಾಡುವ ಅಗತ್ಯ ನಮಗಿಲ್ಲ. ಅವರ ಪಕ್ಷದಲ್ಲಿ ಅಭದ್ರತೆ ಇದೆ. ಹೀಗಾಗಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.