ಬೆಂಗಳೂರು: ನಗರದ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತಗೊಂಡು ತಾಯಿ-ಮಗ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿತ್ತು. ಪಿಲ್ಲರ್ 218ರಲ್ಲಿ ಸ್ಟೇಜಿಂಗ್ ಮತ್ತು ಗೈವೈರ್ ಬೆಂಬಲದೊಂದಿಗೆ ಪಿಲ್ಲರ್ ನಿರ್ಮಾಣ ಹಾಗೂ ಬಲವರ್ಧನೆ ಕಾರ್ಯ ನಡೆಯುತ್ತಿತ್ತು. ಆದರೆ, 18 ಮೀಟರ್ ಎತ್ತರದ ಪಿಲ್ಲರ್ನ ಗೈವೈರ್‌ಗಳ ಪೈಕಿ ಒಂದು ತಂತಿ ಸಡಿಲಗೊಂಡು ತುಂಡಾಗಿದೆ. ಇದರಿಂದಾಗಿ ಪಿಲ್ಲರ್ ಕೆ.ಆರ್.ಪುರಂ ಹೆಬ್ಬಾಳ ಮುಖ್ಯರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಾವುನೋವು ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಗೆ ಮನವಿ ಮಾಡಲಾಗುವುದು. ಆಂತರಿಕ ತಾಂತ್ರಿಕ ತಂಡವೂ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ತೇಜಸ್ವಿನಿ ಹಾಗೂ ಅವರ ಪುತ್ರ ವಿಹಾನ್ ಸಾವಿಗೆ ಕಾರಣವಾದ ಕಳಪೆ ಕಾಮಗಾರಿ, ನಿರ್ಲಕ್ಷ್ಯ ಬಗ್ಗೆ ಮಹಿಳೆಯ ಪತಿ ಲೋಹಿತ್ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಗಾಯಾಳುಗಳ ಚಿಕಿತ್ಸಾ ವೆಚ್ಚದ ಜೊತೆಗೆ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಘೋಷಣೆ ಮಾಡಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ನಾಗವಾರ ರಿಂಗ್ ರಸ್ತೆಯ ಹೆಚ್ಬಿಆರ್ ಲೇಔಟ್ನಲ್ಲಿ ನಿನ್ನೆ ಬೆಳಗ್ಗೆ 10:30ರ ಸುಮಾರಿಗೆ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್, ಪತ್ನಿ ತೇಜಸ್ವಿನಿ ಮತ್ತು ಇಬ್ಬರು ಅವಳಿ ಮಕ್ಕಳೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡಲು ಮಾನ್ಯತಾ ಟೆಕ್ಪಾರ್ಕ್ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರನೇ ಕುಸಿದಿದೆ. ಘಟನೆಯಲ್ಲಿ ತೇಜಸ್ವಿನಿ (35) ಮತ್ತು ಎರಡೂವರೆ ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಪಾರಾಗಿದ್ದರು.
ಈ ಹಿಂದೆ ಸಂಭವಿಸಿದ ಮೆಟ್ರೋ ಅನಾಹುತಗಳಿವು..:ಈ ಹಿಂದೆಯೂ ಸಹ ಇಂತಹ ಘಟನೆಗಳು ಮರುಕಳಿಸಿವೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗ ಕಾಮಗಾರಿ ವೇಳೆ 2021 ಅ.24 ರಂದು ಬೆಳಗ್ಗೆ 6.30 ಕ್ಕೆ ಕ್ರೇನ್ ಅರ್ಧಕ್ಕೆ ಮುರಿದು ಬಿದ್ದಿತ್ತು. 2020ರ ಫೆ. 28 ರಂದು ಕೆಂಗೇರಿ ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಸುವ ವೇಳೆ ಕಾರ್ಮಿಕ ಬಿದ್ದು ಮೃತಪಟ್ಟಿದ್ದ. 2019ರ ಜನವರಿ 28 ರಂದು ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಅಜ್ಜಿಯ ತೋಳಲ್ಲಿದ್ದ ಮಗು ಜಾರಿ ಎಸ್ಕಲೇಟರ್ನಿಂದ ಬಿದ್ದು ಮೃತಪಟ್ಟಿತ್ತು. 2019ರ ನವೆಂಬರ್ನಲ್ಲಿ 7 ಕ್ರಷರ್ ಇಳಿಸುವಾಗ ಚೈನ್ ತುಂಡಾಗಿ ಕಾರ್ಮಿಕ ಸಮೀರ್ ಮೃತಪಟ್ಟಿದ್ದ. 2019ರ ಆಗಸ್ಟ್ನಲ್ಲಿ ಇಂದಿರಾ ನಗರ ಮೆಟ್ರೋ ಸ್ಟೇಷನ್ ಪಿಲ್ಲರ್ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. 2018ರಲ್ಲಿ ಟ್ರಿನಿಟಿ ನಿಲ್ದಾಣ ನೇರಳೆ ಮೆಟ್ರೋ ಮಾರ್ಗ ಬೈಯಪ್ಪನಹಳ್ಳಿ ಮುತ್ತು ಮೈಸೂರು ರಸ್ತೆಯಲ್ಲಿನ ಪಿಲ್ಲರ್ 155 ರಲ್ಲಿ ಬಿರುಕು ಕಾಣಿಸಿಕೊಂಡಿತ್ತು.