ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು. ಸ್ವತಂತ್ರ ನೀರು ನಿರ್ವಹಣಾ ಸಮಿತಿ ರಚಿಸಬೇಕು. ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎನ್ನುವ ಮೂರು ನಿರ್ಣಯಗಳನ್ನು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕೈಗೊಂಡಿದ್ದು, ಕರ್ನಾಟಕ ಬಂದ್ ಸೇರಿದಂತೆ ಕಾವೇರಿ ವಿಚಾರದಲ್ಲಿ ಮುಂದಿನ ಹೋರಾಟದ ಸ್ವರೂಪದ ಬಗ್ಗೆ ನಿರ್ಧಾರ ಕೈಗೊಳ್ಳಲು ಶನಿವಾರ ಬೆಂಗಳೂರಿನ ಎಲ್ಲಾ ಸಂಘ ಸಂಸ್ಥೆ, ಸಂಘಟನೆಗಳ ಸಭೆಯನ್ನು ಕರೆಯಲಾಗಿದೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೈಸರ್ಗಿಕ ವಿಕೋಪ ಕುಡಿಯುವ ನೀರಿನ ಅಗತ್ಯತೆ ಅರಿತುಕೊಳ್ಳದ ಅವೈಜ್ಞಾನಿಕ ಕರಡು ಆದೇಶವನ್ನು ಖಂಡಿಸಲು ಸರ್ಕಾರದ ವಚನ ಭ್ರಷ್ಟತೆ ಖಂಡಿಸಲು ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಚಿಂತನ ಮಂಥನ ವಿಚಾರಗೋಷ್ಠಿ ನಡೆಸಲಾಯಿತು. ರೈತ ಸಂಘ, ಆಮ್ ಆದ್ಮಿ ಪಕ್ಷ, ಜನತಾದಳ ಹಾಗು ಕನ್ನಡ ಪರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ನಾಯಕರು ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ನಂತರ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ನಿರ್ಣಯಗಳ ಕುರಿತು ಸಭೆ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ರೈತ ನಾಯಕ ಕುರುಬೂರು ಶಾಂತಕುಮಾರ್, ಸುಪ್ರೀಂ ಕೋರ್ಟ್ ನೀರು ಹರಿಸುವ ವಿಚಾರದಲ್ಲಿ ಪ್ರಾಧಿಕಾರದ ಆದೇಶ ಪಾಲಿಸುವಂತೆ ಹೇಳಿದೆ. ಪ್ರಾಧಿಕಾರದ ಆದೇಶವನ್ನು ಸರ್ಕಾರ ಒಪ್ಪಬಾರದು. ಸಂಕಷ್ಟ ಸೂತ್ರ ತಯಾರು ಮಾಡದ ಕಾರಣ ಆದೇಶ ಪಾಲನೆ ಸಾಧ್ಯವಿಲ್ಲ ಎಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಅನಿವಾರ್ಯವಾದರೆ ಅಧಿಕಾರ ತ್ಯಾಗ ಮಾಡಲು ಸರ್ಕಾರದವರು ಸಿದ್ಧರಾಗುವಂತೆ ಕರೆ ನೀಡುವ ಮೊದಲ ನಿರ್ಣಯ ಕೈಗೊಳ್ಳಲಾಗಿದೆ.
ಇದರ ಜೊತೆ ಎರಡನೆಯ ಪ್ರಮುಖ ನಿರ್ಣಯ ಸ್ವತಂತ್ರ ನೀರು ನಿರ್ವಹಣಾ ಸಮಿತಿ ರಚಿಸಬೇಕು ಎನ್ನುವುದಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ, ಕೇರಳ ಸೇರಿ ನಾಲ್ಕು ರಾಜ್ಯಗಳ ರೈತ ಪ್ರತಿನಿಧಿಗಳ, ತಜ್ಞರ ಒಳಗೊಂಡ ಸಂವಿಧಾನ ಬದ್ಧ ಸಮಿತಿ ರಚಿಸಿ ಅದರ ವಶಕ್ಕೆ ಕಾವೇರಿ ನೀರು ನಿರ್ವಹಣಾ ಜವಾಬ್ದಾರಿ ವಹಿಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ. ಹಾಗು ಕನ್ನಡಪರ ಮತ್ತು ರೈತ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಎನ್ನುವ ಮೂರನೇಯ ನಿರ್ಣಯ ಕೈಗೊಳ್ಳಲಾಗಿದೆ.