ಕರ್ನಾಟಕ

karnataka

ETV Bharat / state

ರೋಗ ಲಕ್ಷಣ ಇರುವವರು ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ: ಸಚಿವ ಸುಧಾಕರ್​​ - ಸಚಿವ ಡಾ.ಕೆ. ಸುಧಾಕರ್

ರಾಜ್ಯದಲ್ಲಿ 3193 ಸಕ್ರಿಯ ಕೇಸ್​ಗಳಿವೆ. ಇದರಲ್ಲಿ ಶೇ. 97ರಷ್ಟು ಜನರಿಗೆ ರೋಗದ ಯಾವುದೇ ಲಕ್ಷಣಗಳು ಇಲ್ಲ. ಉಳಿದ ಶೇ. 3ರಷ್ಟು ಸೋಂಕಿತರಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

K.Sudhakar
ಸಚಿವ ಡಾ.ಕೆ. ಸುಧಾಕರ್

By

Published : Jun 11, 2020, 9:13 PM IST

ಬೆಂಗಳೂರು:ರಾಜ್ಯದಲ್ಲಿ 2976 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. 3193 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ ಕೊರೊನಾ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 60 ವರ್ಷ ಮೇಲ್ಪಟ್ಟವರು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡಲೇ ಫೀವರ್ ಕ್ಲಿನಿಕ್​ಗೆ ಬರಬೇಕು. ವೃದ್ಧರು ಉದಾಸೀನ ಮಾಡಿದರೆ ದೇವರೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ. ಇದು ಆರೋಗ್ಯ ಇಲಾಖೆಯ ಲೋಪವಲ್ಲ ಎಂದರು.

ರಾಜ್ಯದಲ್ಲಿ 3193 ಸಕ್ರಿಯ ಕೇಸ್​ಗಳಿವೆ. ಇದರಲ್ಲಿ ಶೇ. 97ರಷ್ಟು ಜನರಿಗೆ ಕಾಯಿಲೆಯ ಯಾವುದೇ ಲಕ್ಷಣಗಳು ಇಲ್ಲ. ಉಳಿದ ಶೇ. 3ರಷ್ಟು ಸೋಂಕಿತರಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಶೇ. 50ರಷ್ಟು ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದಕ್ಕೆ ಕಾರಣಗಳನ್ನು ತಿಳಿಸಿದ ಸಚಿವರು, ಹೆಚ್ಚಿನ ಸೋಂಕಿತರು ರೋಗ ತೀವ್ರವಾಗಿ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಿದ್ದಾರೆ. ಕೊನೆ ಹಂತದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾರಿಗಾದರೂ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ತಪಾಸಣಾ ಕೇಂದ್ರಗಳಿಗೆ ತೆರಳುವಂತೆ ಸೂಚಿಸಿದರು. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾವುದೇ ಲಕ್ಷಣ ಕಂಡು ಬಂದಲ್ಲಿ ಮನೆಯಲ್ಲಿರುವ ಯುವಕರು ಜವಾಬ್ದಾರಿಯಿಂದ ತಪಾಸಣೆ ಮಾಡಿಸುವಂತೆ ಮನವಿ ಮಾಡಿದರು.

ಕರ್ನಾಟಕದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಹೇಳಿದರು. ಕಂಠೀರವ ಕ್ರೀಡಾಂಗಣ ಸೇರಿದಂತೆ ದೊಡ್ಡ ಕ್ರೀಡಾಂಗಣಗಳನ್ನು ಬಳಕೆ ಮಾಡುತ್ತಿದ್ದೇವೆ. ಇಂದಿನ ಪ್ರಕರಣಗಳಲ್ಲಿ 157 ಮಂದಿ ಹೊರಗಿನಿಂದ ಬಂದವರಾಗಿದ್ದಾರೆ ಎಂದರು.

ಬಿಬಿಎಂಪಿಯಿಂದ ತಂಡಗಳ ರಚನೆ: ರೋಗ ಲಕ್ಷಣಗಳು ಇರುವವರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲು ಅನುಕೂಲವಾಗುವಂತೆ ಬಿಬಿಎಂಪಿ ವತಿಯಿಂದ 800 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಮನೆ ಮನೆಗೆ ತೆರಳಿ ರೋಗ ಲಕ್ಷಣ ಇರುವವರ ಸಮೀಕ್ಷೆ ನಡೆಸಲಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದರು.

ಬದಲಾದ ಕಂಟೈನ್ಮೆಂಟ್ ವ್ಯಾಖ್ಯಾನ:

ನಗರದಲ್ಲಿ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂಟೈನ್ಮೆಂಟ್ ಪ್ರದೇಶಗಳು ಈಗ ಮೊದಲಿನಂತಿಲ್ಲ. ಅದರ ವ್ಯಾಖ್ಯಾನ ಬದಲಾಗಿದೆ. ವಾರ್ಡ್ ವ್ಯಾಪ್ತಿಯ ಪ್ರದೇಶವನ್ನು ಘೋಷಿಸಲಾಗುತ್ತಿತ್ತು. ಈಗ ಅದು ಕೇವಲ ಸೋಂಕಿತ ವ್ಯಕ್ತಿಯ ಮನೆಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ 1.2 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ 60 ಕಂಟೈನ್ಮೆಂಟ್ ಹೆಚ್ಚೇನೂ ಅಲ್ಲ ಎಂದರು. ನಗರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಚಿಕಿತ್ಸೆ ನೀಡಿ ಮುಕ್ತವಾಗಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ 60 ಕಂಟೈನ್ಮೆಂಟ್ ವಲಯದಲ್ಲಿ ಮೊದಲು ಸಮೀಕ್ಷೆ ನಡೆಸಿ ಕೊರೊನಾ ಲಕ್ಷಣ ಇರುವವರನ್ನು ಪರೀಕ್ಷೆ ಮಾಡಲು ತೀರ್ಮಾನ ಮಾಡಿದ್ದೇವೆ. ಈಗ ಜ್ವರ ಬಂದು ಹೋದವರಿಗೆ ಮತ್ತೆ ಆಗಸ್ಟ್​ನಲ್ಲಿ ಮತ್ತೊಂದು ಬಾರಿ ಕಾಣಿಸಿಕೊಳ್ಳುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತ್ಯೇಕ ಮನೆಗಳಲ್ಲಿ ಪಾಸಿಟಿವ್ ಕೇಸ್​ಗಳಿದ್ದರೆ ಆ ಮನೆ ಮಾತ್ರ ಸೀಲ್​ ಡೌನ್ ಮಾಡಲಾಗುತ್ತದೆ ಎಂದು ಹೇಳಿದರು.

ಎಲ್​ಕೆಜಿಯಿಂದ 7ನೇ ತರಗತಿವರೆಗೂ ಆನ್​ಲೈನ್ ಕ್ಲಾಸ್ ರದ್ದು ಮಾಡಬೇಕೆಂಬ ಚರ್ಚೆ ಸಚಿವ ಸಂಪುಟ ಸಭೆಯಲ್ಲಿ ನಡೆಯಿತು. ನಿನ್ನೆಯಿಂದ 5ನೇ ತರಗತಿವರೆಗೂ ಆನ್​ಲೈನ್ ಕ್ಲಾಸ್ ರದ್ದು ಮಾಡಿದ್ದಾರೆ‌. ಇಂದು 7ನೇ ತರಗತಿವರೆಗೂ ರದ್ದು ಮಾಡಿ ಅಂತ ಕೆಲ ಸಚಿವರು ಸಲಹೆ ಕೊಟ್ಟರು. ಇದರಲ್ಲಿ ಸಚಿವ ಮಾಧುಸ್ವಾಮಿ ಹೇಳಿರುವುದು ಸರಿ ಇದೆ. ನಾಳೆ ಶಿಕ್ಷಣ ಸಚಿವರು ಘೋಷಣೆ ಮಾಡಬಹುದು ಎಂದು ಸಚಿವರು ತಿಳಿಸಿದರು.

ABOUT THE AUTHOR

...view details