ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಬೆಂಗಳೂರು: ಸಾಲ ತೀರಿಸಲು ಸುಲಭವಾಗಿ ಹಣ ಸಂಪಾದನೆಗಾಗಿ ಮಾದಕ ಸರಬರಾಜು ಆರಂಭಿಸಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಶಾಖಪಟ್ಟಣಂ ಮೂಲದ ಕೊರಡ ಸಾಯಿ ಅಮರನಾಥ್ ಬಂಧಿತ ಆರೋಪಿ. ಇನ್ಸ್ಟಾಗ್ರಾಂನಲ್ಲಿ ವಿವಿಧ ಹೆಸರಿನಲ್ಲಿ ಖಾತೆಗಳನ್ನು ತೆರೆದು ಗಿರಾಕಿಗಳನ್ನ ಸಂಪರ್ಕಿಸುತ್ತಿದ್ದ ಆರೋಪಿ ಅಮರನಾಥ್ ಎಂಬಾತನನ್ನು ಬೆಂಗಳೂರಿನಲ್ಲಿ ತನ್ನ ಗಿರಾಕಿಯೊಬ್ಬನಿಗೆ ಮಾದಕ ಸರಬರಾಜು ಮಾಡಲು ಬಂದಾಗ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಾಲ ತೀರಿಸಲು ಎಂಬಿಎ ಪದವೀಧರನ ಮಾದಕ ದಂಧೆ
ಎಂಬಿಎ ಪದವೀಧರನಾಗಿದ್ದ ಅಮರನಾಥ್, ಸಹೋದರಿಯ ಮದುವೆ ಸಂದರ್ಭದಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೇ ಸ್ನೇಹಿತನ ಕಾರನ್ನು ಒಯ್ದು ಅಪಘಾತ ಮಾಡಿದ್ದ. ಒಂದು ಕಡೆ ಸಾಲ ಮತ್ತೊಂದು ಕಡೆ ಸ್ನೇಹಿತನ ಕಾರು ರಿಪೇರಿ ಖರ್ಚು ಸರಿದೂಗಿಸಲಾಗದೆ ವೇಗವಾಗಿ ಹಣ ಸಂಪಾದನೆಗಾಗಿ ಮಾದಕ ಪದಾರ್ಥ ಸರಬರಾಜಿನ ಹಾದಿ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಮ್ಮನಹಳ್ಳಿ ಬಳಿ ಮಾದಕ ದ್ರವ್ಯದ ಜೊತೆ ಬಂದಿದ್ದಾಗ ಆರೋಪಿಯನ್ನು ಬಂಧಿಸಿದ ಬಾಣಸವಾಡಿ ಠಾಣಾ ಪೊಲೀಸರು, ಬಂಧಿತನಿಂದ 12 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಮಾದಕ ದ್ರವ್ಯ ವಶಕ್ಕೆ ಪಡೆದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.
ಓದಿ:ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಸರಬರಾಜು: ಬಿಹಾರ ಮೂಲದ ಆರೋಪಿ ಬಂಧನ