ಕರ್ನಾಟಕ

karnataka

ETV Bharat / state

ರಾಘವೇಂದ್ರ ಔರಾದ್ಕರ್​​ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸಿಎಂಗೆ ಎಂ.ಬಿ.ಪಾಟೀಲ್​ ಮನವಿ

ಪೊಲೀಸ್​ ಇಲಾಖಾ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್​ ವರದಿಯನ್ನು ವಸ್ತುನಿಷ್ಠವಾಗಿ ಜಾರಿಗೊಳಿಸುವಂತೆ ಕೋರಿ ಮಾಜಿ ಸಚಿವ ಎಂ.ಬಿ.ಪಾಟೀಲ್​​, ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

File Photo
ಸಂಗ್ರಹ ಚಿತ್ರ

By

Published : Nov 14, 2020, 6:16 PM IST

ಬೆಂಗಳೂರು: ಪೊಲೀಸರ ವೇತನ ಹೆಚ್ಚಳ ಮಾಡುವ ಸಲುವಾಗಿ ನೇಮಕಗೊಂಡಿದ್ದ ರಾಘವೇಂದ್ರ ಔರಾದ್ಕರ್​ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ.

ಈ ಸಂಬಂಧ ಸಿಎಂ ಬಿಎಸ್​​ವೈ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಶ್ರೇಣಿ ಹೆಚ್ಚಿಸುವಿಕೆ, ಭತ್ಯೆ ಹಾಗೂ ಇತರೆ ಸೌಕರ್ಯಗಳನ್ನು ನೀಡುವ ಕುರಿತು ಔರಾದ್ಕರ್​ ವರದಿಯಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಈ ವರದಿಯನ್ನು ಭಾಗಶಃ ಮಾತ್ರ ಜಾರಿಗೊಳಿಸಿದ್ದು, ಪೂರ್ಣ ಪ್ರಮಾಣದಲ್ಲಿ ಯಥಾವತ್ತಾಗಿ ಜಾರಿಗೆ ತಂದಿಲ್ಲ. ಹಣಕಾಸು ಇಲಾಖೆ ನಿರ್ಧಾರದಿಂದ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಈಗಾಗಲೇ ಅನೇಕ ವರ್ಷಗಳ ಕಾಲ ಹಗಲಿರುಳು ಸೇವೆ ಸಲ್ಲಿಸುತ್ತಿರುವ ರಾಜ್ಯದ ಪೊಲೀಸ್ ಸಿಬ್ಬಂದಿಗೆ ಅನ್ವಯವಾಗದೆ ಇರುವುದು ನಿರಾಶಾದಾಯಕ. ನಾಡಿನ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗೆ ನಾವು ಇನ್ನೂ ಹೆಚ್ಚು ಪ್ರೋತ್ಸಾಹ, ವೇತನ ಹಾಗೂ ಭತ್ಯೆ ಹೆಚ್ಚಿಸುವ ಮೂಲಕ ಇತರೆ ಸೌಲಭ್ಯಗಳನ್ನು ನೀಡಿ ಅವರನ್ನು ಗೌರವಿಸಬೇಕಿದೆ ಎಂದಿದ್ದಾರೆ.

ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಪಣಕ್ಕಿಟ್ಟು, ಕರ್ತವ್ಯ ನಿರ್ವಹಿಸಿರುವ ರಾಜ್ಯದ ಪೊಲೀಸ್ ಇಲಾಖೆಯ ಸಮಸ್ತ ಸಿಬ್ಬಂದಿಗೆ, ಔರಾದ್ಕರ್​ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ನ್ಯಾಯ ದೊರಕಿಸಬೇಕಿದೆ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಕತ್ತಲೆಯಿಂದ ಬೆಳಕಿನಡೆಗೆ ಪೊಲೀಸ್ ಸಿಬ್ಬಂದಿಯ ಬದುಕನ್ನು ಬೆಳಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಆದ್ದರಿಂದ ಔರಾದ್ಕರ್​ ವರದಿಯನ್ನು ಸಂಪೂರ್ಣವಾಗಿ, ಯಥಾವತ್ತಾಗಿ ಜಾರಿಗೊಳಿಸಲು ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details