ಬೆಂಗಳೂರು: ಎಸ್ ಟಿ ಮೀಸಲಾತಿಗೆ ಆಗ್ರಹಿಸಿ ಭಾನುವಾರ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಿತು. ಆದರೆ ಲಕ್ಷಾಂತರ ಜನ ಸೇರಿದ್ದ ಸಮಾವೇಶದಲ್ಲಿ ಕೋವಿಡ್ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು.
ಸಮಾವೇಶದಲ್ಲಿ ಜನಸಾಗರವೇ ಹರಿದು ಬಂದಿತ್ತು. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ ಸಚಿವರು, ರಾಜಕಾರಣಿಗಳು ಪಾಲ್ಗೊಂಡ ಈ ಸಮಾವೇಶದಲ್ಲಿ ಯಾವುದೇ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಸಾಮಾಜಿಕ ಅಂತರವನ್ನಂತೂ ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ಸೇರಿದ್ದ ಲಕ್ಷಾಂತರ ಮಂದಿಯಲ್ಲಿ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ವೇದಿಕೆ ಮೇಲೆ ಕೂತಿದ್ದ ಗಣ್ಯರೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರಿದ್ದರು.
ಸಿದ್ದರಾಮಯ್ಯ ಗೈರು: ಇನ್ನು ಬೃಹತ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗಿದ್ದರು. ಈ ಮುಂಚಿನಿಂದಲೂ ಎಸ್ ಟಿ ಹೋರಾಟದಲ್ಲಿ ಗುರುತಿಸಿಕೊಳ್ಳದ ಸಿದ್ದರಾಮಯ್ಯ, ಇಂದು ನಡೆದ ಬೃಹತ್ ಸಮಾವೇಶಕ್ಕೆ ನಿರೀಕ್ಷೆಯಂತೆಯೇ ಗೈರಾಗಿದ್ದರು. ಆದರೆ ಸಚಿವ ಕೆ.ಎಸ್.ಈಶ್ವರಪ್ಪ, ಎಚ್.ವಿಶ್ವನಾಥ್ ಪರೋಕ್ಷವಾಗಿ ಸಿದ್ದರಾಮಯ್ಯರನ್ನು ತಮ್ಮ ಭಾಷಣದಲ್ಲಿ ಟೀಕಿಸಿದರು.