ಬೆಂಗಳೂರು:ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಇಂದು ತಿಲಕ್ ನಗರದಲ್ಲಿರುವ ಮತ್ತೊಂದು ಐಎಂಎ ಕಂಪನಿ ಕಚೇರಿಯಲ್ಲಿ ಎಸ್ಐಟಿ ತಂಡದ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತಿಲಕ್ ನಗರದಲ್ಲಿ ಎರಡು ಅಂತಸ್ತಿನ ಐಎಂಎ ಕಚೇರಿ ಇದ್ದು, ಈ ಕಚೇರಿಯಲ್ಲಿ ಹೂಡಿಕೆದಾರರ ಚಿನ್ನಾಭರಣವನ್ನು ಅಡಮಾನವಾಗಿ ಇರಿಸಿಕೊಳ್ಳಲಾಗುತ್ತಿತ್ತು ಎಂದು ಐಎಂಎ ಕಂಪನಿಯ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಎಸ್ಐಟಿ ತಂಡ ಪರಿಶೀಲನೆಯಲ್ಲಿ ತೊಡಗಿದೆ.
ಮತ್ತೊಂದೆಡೆ ಎಸ್ಐಟಿ ತನಿಖೆಯಲ್ಲಿ ಮನ್ಸೂರ್ ಅಸಲಿ ಆಸ್ತಿ ಎಷ್ಟು ಎನ್ನುವುದು ಬಹಿರಂಗವಾಗಿದೆ. ಮನ್ಸೂರು ವಿಡಿಯೋ ಹಾಗೂ ಆಡಿಯೋದಲ್ಲಿ ನನ್ನ ಬಳಿ 500 ಕೋಟಿ ರೂ ಮೌಲ್ಯದ ಆಸ್ತಿ ಇದೆ. ಇದನ್ನು ಹೂಡಿಕೆದಾರರಿಗೆ ನೀಡಿ ಎಂದಿದ್ದ. ಆದರೆ ಮನ್ಸೂರ್ ಹೆಸರಿನ ಒಟ್ಟು 23 ಕಂಪನಿಯಲ್ಲಿ 300 ಕೋಟಿ ಮೌಲ್ಯದ ಆಸ್ತಿ ಮಾತ್ರ ಇದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಐಎಂಎ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 7 ಮಂದಿ ನಿರ್ದೇಶಕರನ್ನು ಈಗಾಗಲೇ ಬಂಧಿಸಿದ್ದು ಇಂದು ಕಸ್ಟಡಿ ಅವಧಿ ಮುಗಿಯುವ ವ ಹಿನ್ನೆಲೆಯಲ್ಲಿ 4ನೇ ಎಸಿಎಂಎಂ ಕೋರ್ಟ್ಗೆ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.