ಬೆಂಗಳೂರು: ನಗರದಲ್ಲಿ ಅರ್ಧ ಗಂಟೆ ಮಳೆ ಬಂದರೆ ಸಾಕು ಹಲವೆಡೆ ರಸ್ತೆಗಳು ನದಿಗಳಾಗಿ ಬಿಡುತ್ತವೆ. ಬಡಾವಣೆಗಳು ಕೆರೆಗಳಾಗುತ್ತವೆ.ಮನೆಗೆ ನುಗ್ಗುವ ಚರಂಡಿ, ರಾಜಕಾಲುವೆ ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಾರೆ.
ಬೆಂಗಳೂರಿನಲ್ಲಿ ಮಳೆಗಾಲಕ್ಕೆ ಪೂರ್ವಸಿದ್ದತೆ ಪ್ರತಿ ವರ್ಷ 209 ಪ್ರವಾಹ ಭೀತಿ ಹುಟ್ಟಿಸುವ ಸೂಕ್ಷ್ಮ ಪ್ರದೇಶಗಳನ್ನ ಬಿಬಿಎಂಪಿ ಪಟ್ಟಿ ಮಾಡುತ್ತಲೇ ಬಂದಿದ್ದರೂ, ಈ ಯಾವುದೇ ಸ್ಥಳಗಳಲ್ಲಿ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದರ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಪೂರ್ವಸಿದ್ದತೆ ಮಾಡಿಕೊಳ್ಳುವ ಸಂಬಂಧ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ, ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ.
ಕೋವಿಡ್ ಮಧ್ಯೆಯೂ ಮಳೆಗಾಲಕ್ಕೆ ಆಗಬೇಕಾದ ಪೂರ್ವಸಿದ್ಧತೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಅನಾಹುತ ತಪ್ಪಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮವಹಿಸಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
209 ಪ್ರವಾಹ ಭೀತಿ ಹುಟ್ಟಿಸುವ ಸೂಕ್ಷ್ಮ ಪ್ರದೇಶ ನಿನ್ನೆ ಕೂಡ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು. ನಗರದಲ್ಲಿ ಪ್ರವಾಹ ಉಂಟಾಗುವಂತಹ 209 ಪ್ರದೇಶಗಳನ್ನು ಗುರುತಿಸಿದ್ದು, ಆ 209 ಸ್ಥಳಗಳಲ್ಲಿ ಸೂಕ್ಷ್ಮವಾಗಿ ಗಮನಿಸಲು ಸಂಬಂಧ ಪಟ್ಟ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರವಾಹ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳು ತೆಗೆಯುವುದು ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಲ್ಲಿ ನೀರು ನಿಲ್ಲುತ್ತದೆ ಎಂಬುದನ್ನ ಗುರುತಿಸಿ ಕ್ರಮವಹಿಸಿ ಎಂದು ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಮಳೆ ನೀರು ನಿಲ್ಲದಂತೆ ಹಾಗೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.
ನಗರದಲ್ಲಿ ಮಳೆಗಾಲದ ವೇಳೆ ನಿಯಂತ್ರಣ ಕೊಠಡಿಗಳ ಅಗತ್ಯವಾಗಿದ್ದು, ತಕ್ಷಣವೇ ವಲಯ ಉಪ ವಿಭಾಗಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ 800 ಕಿ.ಮೀ ಉದ್ದದ ಮಳೆನೀರುಗಾಲುವೆಯಲ್ಲಿ ಈಗಾಗಲೇ 440 ಕಿ.ಮೀ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮೂರು ವರ್ಷಕ್ಕೆ ಒಂದು ಬಾರಿ ಟೆಂಡರ್ ಕರೆದು ಪ್ರತೀ ವರ್ಷ ಮಳೆಗಾಲಕ್ಕೆ ಮೊದಲೇ ಹೂಳು ತೆಗೆಯಲಾಗುತ್ತಿದೆ ಎಂದು ಚೀಫ್ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ.