ಬೆಂಗಳೂರು: ಕೊರೊನಾ ಸೋಂಕಿತರ ಮನೆ ಮುಂದೆ ಪೋಸ್ಟರ್ ಹಾಕುವುದನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಜನತೆಯು ಸ್ಥಳೀಯರಿಂದಾಗುವ ಮುಜುಗರ, ಅಂಜಿಕೆ ಬಿಟ್ಟು ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಲು ಬರಬೇಕಾದ್ರೆ, ಸೋಂಕಿತರ ಮನೆ ಮುಂದೆ ಹಾಕುವ ಪೋಸ್ಟರ್ ನಿಲ್ಲಿಸಬೇಕು ಎಂದು ಟಾಸ್ಕ್ ಫೋರ್ಸ್ ಸಲಹೆ ನೀಡಿದೆ ಎನ್ನಲಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಟಾಸ್ಕ್ ಫೋರ್ಸ್ ನೇರವಾಗಿ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ಈವರೆಗೂ ಪಾಲಿಕೆಗೆ ಈ ಮಾಹಿತಿ ಬಂದಿಲ್ಲ. ಟಾಸ್ಕ್ ಫೋರ್ಸ್ ಸಮಿತಿಯ ವರದಿ ಆಧರಿಸಿ ನಿರ್ಧಾರ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಈವರೆಗೂ ಪೋಸ್ಟರ್ ಅಂಟಿಸುವುದನ್ನು ಬಿಡಬೇಕು ಎಂಬ ಮಾಹಿತಿ ಸಿಕ್ಕಿಲ್ಲ, ಹಾಗಾಗಿ ಪೋಸ್ಟರ್ ಹಾಕುವುದನ್ನು ಕೈಬಿಡಲು ಆಗಲ್ಲ ಎಂದು ತಿಳಿಸಿದರು.
ಇನ್ನೂ ದುಬಾರಿ ಬಿಲ್ ಮಾಡಿ ಜನರಿಂದ ಹಣ ಕಿತ್ತುಕೊಳ್ಳಲು ಹೊರರಾಜ್ಯ, ಅಂತರಾಷ್ಟ್ರೀಯ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒತ್ತಾಯ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯಕ್ಕೆ ಹೊರಗಿನಿಂದ ಬಂದವರಿಗೆ ಹೋಟೆಲ್ ಕ್ವಾರಂಟೈನ್ ನಿಯಮಗಳನ್ನು ಕೈ ಬಿಡಲಾಗಿದೆ. ಟ್ಯಾರಿಫ್ ಆಧಾರದಲ್ಲಿ ಸರ್ಕಾರಿಯೇತರ ಕ್ವಾರಂಟೈನ್ ಆಗಬೇಕಾದರೆ ಕೋವಿಡ್ ಸೋಂಕಿತನ ಕಡೆಯವರೇ ಟ್ಯಾರಿಫ್ ಪ್ಲ್ಯಾನ್ ಆಯ್ಕೆ ಮಾಡುತ್ತಾರೆ. ಇದರಲ್ಲಿ ಪಾಲಿಕೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ. ನಗರದ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸಾಕಷ್ಟು ಅವಕಾಶವಿದ್ದು ಉಚಿತ ಸೇವೆ ಸಹ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ರಸ್ತೆಗಳಲ್ಲಿ ಮೊಬೈಲ್ ವಾಹನದ ಮೂಲಕ ನಡೆಯುತ್ತಿರುವ ಕೊರೊನಾ ಟೆಸ್ಟ್ ಗೆ ಹಿಂದೇಟು:
ಬಿಬಿಎಂಪಿ ವತಿಯಿಂದ ಉಚಿವಾಗಿ ಮತ್ತಿಕೆರೆಯ ರಾಮಯ್ಯ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ ಲೈಬ್ರೆರಿ, ಮೈದಾನಗಳ ಬಳಿ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿತ್ತು. ಅಂಗಡಿ-ಮಳಿಗೆಗಳ ಸಿಬ್ಬಂದಿಯ ಸ್ಯಾಂಪಲ್ ಕಲೆಕ್ಷನ್ಗೆ ಮುಂದಾಗಿದ್ದರು. ಆದರೆ ಜನ ಟೆಸ್ಟ್ಗೆ ಮುಂದಾಗುತ್ತಿಲ್ಲ. ಶೇ. 20ರಷ್ಟು ಜನರು ಮಾತ್ರ ಟೆಸ್ಟ್ಗೆ ಸ್ಪಂದಿಸುತ್ತಿದ್ದಾರೆ. ಹೀಗಾಗಿ ರಸ್ತೆ ಬಳಿ ಬಿಟ್ಟು ಶೋ ರೂಂ, ಕಾರ್ಖಾನೆಗಳ ಬಳಿ ನೌಕರರು, ಸಿಬ್ಬಂದಿಯ ಕೊರೊನಾ ಸೋಂಕು ಪರೀಕ್ಷೆಗೆ ಬಿಬಿಎಂಪಿ ಮುಂದಾಗಿದೆ.