ಕರ್ನಾಟಕ

karnataka

ETV Bharat / state

ಅಧಿಕಾರಕ್ಕಾಗಿ ಒಂದಾಯ್ತಾ ಕಾಂಗ್ರೆಸ್ ಪಕ್ಷದ ಮೂಲ, ವಲಸೆ ಬಣ?

ಮೂಲ ಕಾಂಗ್ರೆಸ್ ನಾಯಕರಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ವಲಸೆ ಕಾಂಗ್ರೆಸ್ ನಾಯಕರಲ್ಲಿ ಗುರುತಿಸಿಕೊಂಡಿರುವ  ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಒಂದೆಡೆ ಸೇರುವ ಮೂಲಕ ರಾಜಕೀಯ ಕುತೂಹಲಕ್ಕೆ ಕಾರಣರಾಗಿದ್ದಾರೆ.

Mallikarjuna Karge  and  Siddaramaiah discussion
ಅಧಿಕಾರಕ್ಕಾಗಿ ಒಂದಾಯ್ತಾ ಕಾಂಗ್ರೆಸ್ ಪಕ್ಷದ ಮೂಲ ವಲಸೆ ಬಣ

By

Published : Jan 26, 2020, 2:20 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಮೂಲ, ವಲಸೆ ಬಣಗಳ ತಿಕ್ಕಾಟ ನಡೆಯುತ್ತಿದ್ದು, ಈ ನಡುವೆ ಎರಡು ಬಣದ ಪ್ರಮುಖ ನಾಯಕರು ಒಂದಾಗಿ ಕಾಣಿಸಿದ್ದು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಭೇಟಿ

ಮೂಲ ಕಾಂಗ್ರೆಸ್ ನಾಯಕರಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ವಲಸೆ ಕಾಂಗ್ರೆಸ್ ನಾಯಕರಲ್ಲಿ ಗುರುತಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಒಂದೆಡೆ ಸೇರುವ ಮೂಲಕ ರಾಜಕೀಯ ಕುತೂಹಲಕ್ಕೆ ಕಾರಣರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು ನಡೆಯುತ್ತಿರುವ ಸಂದರ್ಭದಲ್ಲಿಯೇ ಇಬ್ಬರೂ ನಾಯಕರು ಗಣರಾಜ್ಯೋತ್ಸವ ದಿನ ಒಟ್ಟಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಉಭಯ ನಾಯಕರು ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ಜನಾರ್ಧನ ಹೋಟೆಲ್​ನಲ್ಲಿ ಸೇರಿ ಚರ್ಚಿಸಿದ್ದಾರೆ.

ಮೂಲ, ವಲಸಿಗ ಬಣದ ಇಬ್ಬರು ನಾಯಕರ ಉಪಹಾರ ಇದೀಗ ಕಾಂಗ್ರೆಸ್ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಕುರಿತಾಗಿ ತಂತ್ರ ಹೆಣೆಯುವ ಕಾರ್ಯ ನಡೆದಿದೆಯಾ? ಎಂಬ ಚರ್ಚೆಗೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಲು ಇಬ್ಬರು ನಾಯಕರಿಂದ ಎದುರಾಗುತ್ತಾ ತೊಡಕು ಎಂಬ ಅನುಮಾನ ಕೂಡ ಮೂಡಿದ್ದು, ಹೊಂದಾಣಿಕೆ ರಾಜಕೀಯದ ತಂತ್ರ ತೋರಿದ್ರಾ ಸಿದ್ದರಾಮಯ್ಯ ಎಂಬ ಪ್ರಶ್ನೆ ಉದ್ಭವಿಸಿದೆ.

ಮೂಲ ಕಾಂಗ್ರೆಸಿಗರ ವಿಶ್ವಾಸ ಪಡೆಯಲು ದೊಡ್ಡ ನಾಯಕನ ಬಳಿಯೇ ಸಿದ್ದು ದಾಳ ಉರುಳಿಸಿದ್ದು, ವಿಪಕ್ಷ ನಾಯಕರಾಗಲು ಸಿದ್ದರಾಮಯ್ಯಗೆ ಕಾಂಗ್ರೆಸ್ ಮಹಾರಾಷ್ಟ್ರ ಮಾದರಿ ಅಡ್ಡಿಯಾಗಿ ಕಾಡಿದ್ದು, ಕಾಂಗ್ರೆಸ್ ಮಹಾರಾಷ್ಟ್ರ ಮಾದರಿ ಹುಟ್ಟು ಹಾಕಿದ ನಾಯಕ ಖರ್ಗೆ ಜೊತೆಯೇ ಅವರಿಂದು ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಪ್ರತ್ಯೇಕಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸಿಎಲ್​ಪಿ ನಾಯಕರೇ ವಿಪಕ್ಷ ನಾಯರನ್ನಾಗಿ ಮುಂದುವರಿಸುವ ಬಗ್ಗೆ ಹೈಕಮಾಂಡ್​ಗೆ ಮನವರಿಕೆ ಮಾಡಿ ಎಂದ ಸಿದ್ದರಾಮಯ್ಯ ಇದೇ ಸಂದರ್ಭ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ. ನೀವು ರಾಜ್ಯಸಭೆಗೆ ಹೋಗಬೇಕು. ಬಿಜೆಪಿಯ ವಿರುದ್ಧ ಹೋರಾಡಲು ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ನಿಮ್ಮ ಅಗತ್ಯತೆ ಇದೆ ಎಂದು ಖರ್ಗೆಗೆ ಸಲಹೆ ನೀಡಿದ ಸಿದ್ದರಾಮಯ್ಯ ರಾಜ್ಯದಿಂದ ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಮೂಲಕ ರಾಜ್ಯಸಭೆ ಪ್ರವೇಶದ ಆಸೆಯನ್ನು ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದಲ್ಲಿ ಪ್ರತಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ತಮ್ಮ ರಾಜಕೀಯ ಅನುಕೂಲಕ್ಕೋಸ್ಕರ ಇಂದು ಒಂದೆಡೆ ಸೇರಿ ಚರ್ಚಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

For All Latest Updates

ABOUT THE AUTHOR

...view details