ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಡಾ.ಮಹೇಶ್ ಜೋಷಿ ಅವರಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಡಾ.ಜೋಷಿ, 'ಅರ್ಥಪೂರ್ಣವಾದ, ಐತಿಹಾಸಿಕ ಸ್ಥಳದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ಮುಂದೆ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಬೇಕೆಂಬ ಗುರಿ ಇದೆ. 20 ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವಷ್ಟು ಮಟ್ಟಿಗೆ ದಾಖಲೆ ಮತದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ಅಪಾರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ, ಕ್ರಾಂತಿಕಾರಕ ಬದಲಾವಣೆಯನ್ನು ತಂದು ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರೂ ಘನತೆ, ಗೌರವದಿಂದ ನಾನೂ ಸದಸ್ಯ ಎಂದು ಹೇಳುವ ರೀತಿ ಮಾಡುತ್ತೇನೆ' ಎಂದರು.
'ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಒಟ್ಟಿಗೆ ಸೇರಿಸಲಾಗುವುದು. ಪರಿಷತ್ತನ್ನು ಶಕ್ತಿಯುತ ಮಾಡಲಾಗುವುದು. ಸದಸ್ಯತ್ವವನ್ನು ಈಗಿರುವ 3 ಲಕ್ಷ 40 ಸಾವಿರದಿಂದ ಒಂದು ಕೋಟಿಗೆ ಏರಿಸಲಾಗುವುದು. ಕೇವಲ ಮತದಾನ ಮಾಡುವುದಕ್ಕೋಸ್ಕರವಾಗಿ ಸದಸ್ಯರಲ್ಲ, ಗೌರವಾನ್ವಿತ ಸದಸ್ಯರು' ಎಂದರು. 'ಆಧುನಿಕ ತಂತ್ರಜ್ಞಾನ ಬಳಸಿ, ಮನೆಬಾಗಿಲಿಗೆ, ಹಳ್ಳಿಹಳ್ಳಿಗೆ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಮನೆಬಾಗಿಲಿಗೆ ಮುಟ್ಟಿಸಲಾಗುವುದು' ಎಂದು ಜೋಷಿ ಹೇಳಿದರು.