ಬೆಂಗಳೂರು: ಮಳೆ ಬಾಧಿತ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 33 ರನ್‌ಗಳ ಗೆಲುವು (ವಿಜೆಡಿ ವಿಧಾನ) ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಮೈಸೂರು 185/7 ಉತ್ತಮ ಮೊತ್ತವನ್ನು ದಾಖಲಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು ಇನ್ನಿಂಗ್ಸ್‌ನ 11.1 ಓವರ್ ವೇಳೆಗೆ ಮಳೆ ಅಡ್ಡಿಯಾಯಿತು. ವಿಜೆಡಿ ವಿಧಾನದನ್ವಯ ಬೆಂಗಳೂರು 33 ರನ್‌ಗಳ ಹಿನ್ನೆಡೆಯಿದ್ದಿದ್ದರಿಂದ ಮೈಸೂರು ತಂಡವನ್ನ ವಿಜಯಶಾಲಿ ಎಂದು ಘೋಷಿಸಲಾಯಿತು.
ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡಕ್ಕೆ ಪವರ್‌ಪ್ಲೇ ಅಂತ್ಯದೊಳಗೆ ಆರ್.ಸಮರ್ಥ್ (1), ಕರುಣ್ ನಾಯರ್ (2) ಮತ್ತು ರಾಹುಲ್ ರಾವತ್ (10) ವಿಕೆಟ್ ಪಡೆದ ಶುಭಾಂಗ್ ಹೆಗ್ಡೆ ಬಿಗ್ ಶಾಕ್ ನೀಡಿದರು. ಆರಂಭಿಕ ಆಟಗಾರ ಸಿಎ ಕಾರ್ತಿಕ್ ಅವರ ಶ್ರೇಷ್ಠ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್ ಗಮನಾರ್ಹವಾಗಿ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಹಂತದಲ್ಲಿ 36 ಎಸೆತಗಳಲ್ಲಿ ಕಾರ್ತಿಕ್ ತಮ್ಮ ಅರ್ಧ ಶತಕವನ್ನ ಪೂರೈಸಿದರು. 43 ಎಸೆತಗಳಲ್ಲಿ 62 ರನ್ ಗಳಿಸಿದ್ದಾಗ ಕಾರ್ತಿಕ್ ಶುಭಾಂಗ್ ಹೆಗ್ಡೆಗೆ ನಾಲ್ಕನೇ ಬಲಿಯಾದರು. ನಂತರ ಬಂದ ತುಷಾರ್ ಸಿಂಗ್ (19) ಮತ್ತು ಶಿವಕುಮಾರ್ ರಕ್ಷಿತ್ (10), ಮನೋಜ್ ಭಾಂಡಗೆ (28) ಮತ್ತು ಜೆ ಸುಚಿತ್ (31*) ಉತ್ತಮ ಕೊಡುಗೆ ನೀಡುವುದರೊಂದಿಗೆ ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 185 ರನ್ ತಲುಪಿತು.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಕಳಪೆ ಆರಂಭ ಪಡೆಯಿತು. ಡಿ.ನಿಶ್ಚಲ್ (6), ಮಯಾಂಕ್ ಅಗರ್ವಾಲ್ (2), ಶುಭಾಂಗ್ ಹೆಗ್ಡೆ (13) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಜಸ್ವಂತ್ ಆಚಾರ್ಯ (19*) ಹಾಗೂ ಸೂರಜ್ ಅಹುಜಾ (31) ರನ್ ಗಳಿಸುವ ಮೂಲಕ ಇನ್ನಿಂಗ್ಸ್‌ಗೆ ಕೊಂಚ ಚೇತರಿಕೆ ನೀಡಿದರು. ಈ ಹಂತದಲ್ಲಿ ಹತ್ತನೇ ಓವರ್ ಎಸೆದ ಜೆ.ಸುಚಿತ್, ಸೂರಜ್ ಅಹುಜಾ ವಿಕೆಟ್ ಪಡೆದರು.