ಬೆಂಗಳೂರು: ಬಿ.ಆರ್.ಶರತ್ ದಾಖಲಿಸಿದ ಅಜೇಯ ಶತಕ (111) ಹಾಗೂ ರೋಹನ್ ಪಾಟೀಲ್ (54) ಅರ್ಧಶತಕದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಮಂಗಳೂರು ಡ್ರ್ಯಾಗನ್ಸ್ 5 ವಿಕೆಟ್‌ಗಳ ಜಯ ದಾಖಲಿಸಿದೆ. ಮೈಸೂರು ನೀಡಿದ 202 ರನ್ಗಳ ಬೃಹತ್ ಗುರಿಯನ್ನು ಮಂಗಳೂರು ತಂಡ 7 ಎಸೆತ ಬಾಕಿ ಇರುವಂತೆಯೇ ತಲುಪಿತು.
ಮಂಗಳೂರು ಇನ್ನಿಂಗ್ಸ್ ಹೀಗಿತ್ತು..:ಬೃಹತ್ ಗುರಿ ಚೇಸ್ ಪ್ರಾರಂಭಿಸಿದ ಮಂಗಳೂರು ತಂಡ 6 ರನ್ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಒಂದಾದ ರೋಹನ್ ಪಾಟೀಲ್ ಹಾಗೂ ಬಿ.ಆರ್.ಶರತ್ ಮೈಸೂರು ಬೌಲರ್‌ಗಳ ಬೆವರಿಳಿಸಿದರು. ಟಿ20 ಪಂದ್ಯಕ್ಕೆ ಹೇಳಿಮಾಡಿಸಿದಂತಿರುವ ಬೆಂಗಳೂರು ಪಿಚ್ನಲ್ಲಿ ಈ ಜೋಡಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರು. 52 ಎಸೆತಗಳಲ್ಲಿ 96 ರನ್ಗಳನ್ನು ಇಬ್ಬರು ಆಟಗಾರರು ಜಂಟಿಯಾಗಿ ಕಲೆಹಾಕಿದರು. ಇದರಿಂದಾಗಿ ಮಂಗಳೂರು ತಂಡಕ್ಕೆ ಬೃಹತ್ ಗುರಿ ಭೇದಿಸುವ ಹಾದಿ ಸರಳವಾಯಿತು.
ಆದರೆ, 54 ರನ್ ಗಳಿಸಿದ್ದ ರೋಹನ್ ಪಾಟೀಲ್ ಜೆ.ಸುಚಿತ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ವಿಕೆಟ್ ಕೀಪರ್ ಶರತ್ ತಮ್ಮ ಏಕಾಂಗಿ ಆಟ ಮುಂದುವರೆಸಿದರು. ರೋಹನ್ ನಂತರ ಮತ್ತಾರೂ ಕೂಡ ಶರತ್‌ಗೆ ಸೂಕ್ತ ಜೊತೆಯಾಟ ನೀಡಲಿಲ್ಲ. ಅನೀಶ್ವರ್ ಗೌತಮ್ (6), ಕೆ.ಸಿದ್ದಾರ್ಥ್ (14), ಅನಿರುದ್ಧ ಜೋಶಿ (2) ಬೇಗ ವಿಕೆಟ್ ಕೊಟ್ಟರು.
99 ರನ್ ಗಳಿಸಿ ಆಡುತ್ತಿದ್ದಾಗ ಶರತ್‌ಗೆ ಒಂದು ಜೀವದಾನ ಸಿಕ್ಕಿತು. ಸಿ.ಎ.ಕಾರ್ತಿಕ್ ಎಸೆತದಲ್ಲಿ ಮಿಡ್ ಪಾಯಿಂಟ್ನಲ್ಲಿ ಕಟ್ ಮಾಡಲು ಹೋಗಿ ಕ್ಯಾಚಿತ್ತರು. ಆದರೆ ಇದು ಎದುರಾಳಿ ಆಟಗಾರ ಕೈತಪ್ಪಿದ್ದರಿಂದ ಮಹಾರಾಜ ಟ್ರೋಫಿಯ ಮೊಟ್ಟಮೊದಲ ಶತಕವನ್ನು ಶರತ್ ದಾಖಲಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಮೂಡಿಬಂದಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಶರತ್ ಹಾಗೂ ನಾಯಕ ಗೌತಮ್ ಜೋಡಿ 7 ಎಸೆತ ಬಾಕಿ ಇರುವಂತೆಯೇ ಮಂಗಳೂರಿಗೆ ಗೆಲುವು ತಂದಿಟ್ಟರು. 61 ಎಸೆತಗಳಲ್ಲಿ 111 ರನ್ ಗಳಿಸಿದ ಶರತ್ ಅಜೇಯರಾಗುಳಿದರು.
ಮೈಸೂರು ಇನ್ನಿಂಗ್ಸ್ ವಿವರ: ಇದಕ್ಕೂ ಮೊದಲು, ಟಾಸ್ ಸೋತ ಮೈಸೂರು ತಂಡ ಬ್ಯಾಟಿಂಗ್ಗೆ ಇಳಿಯಿತು. ಸಿ.ಎ.ಕಾರ್ತಿಕ್ (29) ಮತ್ತು ಸಮರ್ಥ ಜೋಡಿ 42 ರನ್ ಜೊತೆಯಾಟದ ಉತ್ತಮ ಆರಂಭ ನೀಡಿದರು. ಕಾರ್ತಿಕ್ ವಿಕೆಟ್ ಬೆನ್ನಲ್ಲೇ ಸಮರ್ಥ ಔಟಾದರು. ನಾಯಕ ಕರಣ್ ನಾಯರ್ ತಮ್ಮ ಫಾರ್ಮ್ನಲ್ಲಿ ಆಟ ಮುನ್ನಡೆಸಿದರು. ಅವರಿಗೆ ರಾಹುಲ್ ರಾವತ್ (24), ತುಷಾರ್ ಸಿಂಗ್ (20) ಬೆಂಬಲ ನೀಡಿದರು.
ಇವರ ಜೊತೆ ಸೇರಿ ಕರಣ್ ನಾಯರ್ 39 ಎಸೆತಗಳಲ್ಲಿ 77 ರನ್ ಗಳಿಸಿದರು. 77 ರನ್ ಗಳಿಸಿ ಆಡುತ್ತಿದ್ದಾಗ ನಾಯರ್ ರನೌಟ್ಗೆ ಬಲಿಯಾದರು. ಮನೋಜ್ ಭಾಂಡಗೆ 10 ಎಸೆತಗಳಲ್ಲಿ 26* ರನ್ ಗಳಿಸಿ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ನಿಗದಿತ ಓವರ್‌ಗಳ ಅಂತ್ಯಕ್ಕೆ ಮೈಸೂರು ವಾರಿಯರ್ಸ್ 5 ವಿಕೆಟ್‌ಗಳನ್ನು ಕಳೆದುಕೊಂಡು 201 ರನ್ ದಾಖಲಿಸಿತು.
ಇದನ್ನೂ ಓದಿ:Maharaja Trophy: ಲವನಿತ್ - ಶ್ರೀಜಿತ್ ಶತಕದ ಜೊತೆಯಾಟ, ಹುಬ್ಬಳ್ಳಿ ಟೈಗರ್ಸ್ಗೆ 7 ವಿಕೆಟ್ ಜಯ