ಬೆಂಗಳೂರು: ನಾಯಕ ಮಯಾಂಕ್ ಅಗರ್ವಾಲ್ ದಾಖಲಿಸಿದ ಸ್ಪೋಟಕ ಶತಕ ಹಾಗೂ ಬೌಲಿಂಗ್‌ನಲ್ಲಿ ಮೊಹ್ಸಿನ್ ಖಾನ್ ಉತ್ತಮ ಕೊಡುಗೆಯ ನೆರವಿನಿಂದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಂದು ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ 11 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಬ್ಲಾಸ್ಟರ್ಸ್ ಪರ ಮಯಾಂಕ್ ಅಗರ್ವಾಲ್ 57 ಎಸೆತಗಳಲ್ಲಿ 105 ರನ್ ಗಳಿಸಿದರೆ, ಚೊಚ್ಚಲ ಪಂದ್ಯವನ್ನಾಡಿದ ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್ 4/35 ಪಡೆದು ಮಿಂಚಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು, ಮೊದಲ ನಾಲ್ಕು ಓವರ್‌ಗಳಲ್ಲಿ 16 ರನ್ ಗಳಿಸುವ ಮೂಲಕ ಮಂದಗತಿಯ ಆರಂಭ ಪಡೆಯಿತು. ಆರಂಭಿಕ ಇ.ಜೆ ಜಾಸ್ಪರ್ ಕೇವಲ 1 ರನ್ ಗಳಿಸಿ ಜೆ.ಸುಚಿತ್‌ಗೆ ವಿಕೆಟ್ ಒಪ್ಪಿಸಿದರು. ನಿಶ್ಚಲ್ಗೆ ಜೊತೆಯಾದ ಮಯಾಂಕ್ ಅಗರ್ವಾಲ್ ಐದನೇ ಓವರ್‌ನ ಅಂತಿಮ ಎರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪವರ್‌ಪ್ಲೇ ಅಂತ್ಯದ ವೇಳೆಗೆ ಬೆಂಗಳೂರು ತಂಡ 43-1 ತಲುಪಿತು. ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 55 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ನಿಶ್ಚಲ್ (29) ಜೆ.ಸುಚಿತ್‌ಗೆ ಎರಡನೇ ಬಲಿಯಾದರು.
ನಂತರ ಬಂದ ಶುಭಾಂಗ್ ಹೆಗ್ಡೆ 24 ರನ್ ಕೊಡುಗೆ ನೀಡಿ 17ನೇ ಓವರ್‌ನಲ್ಲಿ ಮೋನಿಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಮಯಾಂಕ್ ಅಗರ್ವಾಲ್ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ ಭರ್ಜರಿ ಶತಕ ದಾಖಲಿಸಿದರು. ಶತಕದ ಬೆನ್ನಲ್ಲೇ ಮಯಾಂಕ್ (107) ಗೌತಮ್ ಮಿಶ್ರಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸೂರಜ್ ಅಹುಜಾ 10 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿ ಅಜೇಯ 35 ರನ್ ಗಳಿಸಿದರು. ಇದರಿಂದ ನಿಗದಿತ ಓವರ್‌ಗಳ ಅಂತ್ಯಕ್ಕೆ ತಂಡ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತ್ತು.
ಬೃಹತ್ ಗುರಿ ಪಡೆದ ಮೈಸೂರು ವಾರಿಯರ್ಸ್ ಸ್ಪೋಟಕ ಆರಂಭ ಪಡೆಯಿತು. ಆರಂಭಿಕರಾದ ಎಸ್.ಯು.ಕಾರ್ತಿಕ್ ಮತ್ತು ಆರ್.ಸಮರ್ಥ್ 29 ಎಸೆತಗಳಲ್ಲಿ 60 ರನ್‌ಗಳ ಜೊತೆಯಾಟವಾಡುವ ಮೂಲಕ ಭರವಸೆಯ ಆರಂಭ ನೀಡಿದರು. ಆದರೆ ಪವರ್‌ಪ್ಲೇನ ಕೊನೆಯ ಓವರ್ ಎಸೆದ ಎಲ್.ಆರ್.ಕುಮಾರ್ ಸಮರ್ಥ್ ವಿಕೆಟ್ ಪಡೆಯುವ ಮೂಲಕ ಬೆಂಗಳೂರಿಗೆ ಮೊದಲ ಯಶಸ್ಸು ತಂದುಕೊಟ್ಟರು. ಮತ್ತೊಂದೆಡೆ, ನಾಯಕ ಕರುಣ್ ನಾಯರ್ ಜೊತೆಗೂಡಿದ ಕಾರ್ತಿಕ್, 22 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಪಂದ್ಯಾವಳಿಯ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದರು.