ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಅಭ್ಯರ್ಥಿಯಾಗಿ ಗಿರೀಶ್ ನಾಶಿ ಹೆಸರು ಅಂತಿಮಗೊಳಿಸಲಾಗಿದೆ.
ನ.13ಕ್ಕೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಗಿರೀಶ್ ನಾಶಿ ರಾಜೀನಾಮೆ ನೀಡಿದ್ದರು. ಇದೀಗ ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಹಾಗು ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಬೆಂಗಳೂರು ಮಹಾನಗರ ಅಧ್ಯಕ್ಷ ಆರ್. ಪ್ರಕಾಶ್, ಕಾಂತರಾಜು, ಮಾಜಿ ಉಪಮೇಯರ್ ಭದ್ರೇಗೌಡರ ಹೆಸರುಗಳು ಮುಂಚೂಣಿಯಲ್ಲಿತ್ತು. ಆದರೆ ಕೊನೆಗೆ ಕಾಂಗ್ರೆಸ್ನಿಂದ ವಲಸೆ ಬಂದ ಗಿರೀಶ್ ನಾಶಿಗೆ ಟಿಕೆಟ್ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ.
ಗಿರೀಶ್ .ಕೆ. ನಾಶಿ ಅವರು ಮಹಾಲಕ್ಷ್ಮೀ ಲೇಔಟ್ನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ನಾಯಕರು ಪಾಲಿಕೆ ಸದಸ್ಯ ಶಿವರಾಜ್ಗೆ ಮಣೆ ಹಾಕಿರುವ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಟಿಕೆಟ್ ನೀಡುವುದಾಗಿ ದೇವೇಗೌಡರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನ.13ರಂದು ನಾಶಿ ಕೈ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.