ಬೆಂಗಳೂರು: ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಆದೇಶಿಸಿದ್ದಾರೆ. ಮಹದೇವಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿ.
ಜುಲೈ 9ರಂದು ರಾತ್ರಿ ಠಾಣೆಯ ಎಸ್ಎಚ್ಓ ಪ್ರಭಾರದಲ್ಲಿದ್ದಾಗ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ರಾತ್ರಿ ಪಾಳಿಯಲ್ಲಿದ್ದರು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ (ನಗರ ಸಶಸ್ತ್ರ ಮೀಸಲು) ಡಿಸಿಪಿಯವರು ಠಾಣೆಗೆ ಭೇಟಿ ನೀಡಿದಾಗ ಇಬ್ಬರೂ ಸಿಬ್ಬಂದಿ ನಿದ್ರಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ಠಾಣೆಯ ಸೆಂಟ್ರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಹೆಸರನ್ನು ಕೇಳಿದಾಗ, 'ಯಾರು ಎಂಬುದು ಗೊತ್ತಿಲ್ಲ' ಎಂದು ಉತ್ತರಿಸಿರುವುದರಿಂದ, ಶಿಸ್ತಿನ ಇಲಾಖೆಯ ನೌಕರರಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ಪ್ರದರ್ಶಿಸಿರುವ ಆರೋಪದಡಿ ಇಬ್ಬರೂ ಸಿಬ್ಬಂದಿಗಳನ್ನು ತಕ್ಷಣವೇ ಅಮಾನತುಗೊಳಿಸಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಆದೇಶ ಹೊರಡಿಸಿದ್ದಾರೆ.
ಆದೇಶ ಪ್ರತಿಯಲ್ಲಿ ಏನಿದೆ ? :ಜುಲೈ 9ರಂದು ರಾತ್ರಿ ಮಹದೇವಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಯರಾಮ್ ಎ.ಎನ್ ಹಾಗೂ ಕಾನ್ಸ್ಟೇಬಲ್ ಈರಪ್ಪ ಉಂಡಿ ಅವರು ಠಾಣೆಯ ಎಸ್ಹೆಚ್ಒ ಪ್ರಭಾರದಲ್ಲಿದ್ದಾಗ ರಾತ್ರಿ ಗಸ್ತು ಕರ್ತವ್ಯದಲ್ಲಿ ಮಹದೇವಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ನಿದ್ರಿಸುತ್ತಿದ್ದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಜಯರಾಮ್ ಅವರನ್ನು ಸೆಂಟ್ರಿ ಕರ್ತವ್ಯದಲ್ಲಿರುವ ಸಿಬ್ಬಂದಿಯ ಹೆಸರನ್ನು ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ.