ಬೆಂಗಳೂರು:''ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯಶಸ್ವಿ 9 ವರ್ಷಗಳ ಆಡಳಿತ ಮತ್ತು ಸಾಧನೆಗಳ ಕುರಿತು ತಿಳಿಸಲು ಬಿಜೆಪಿ ಯಿಂದ ಜೂನ್ 30ರವರೆಗೆ ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗುವುದು'' ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರಕಾರವು 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯದ ಆಯ್ದ ಲೋಕಸಭಾ ಸದಸ್ಯರ ಸಭೆ ನಡೆಯಿತು.
ಈ ಸಭೆಯ ಬಳಿಕ ಮಾತನಾಡಿದ ಭಗವಂತ ಖೂಬಾ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರವು ಯಶಸ್ವಿಯಾಗಿ ಮತ್ತು ಫಲಪ್ರದವಾಗಿ 9 ವರ್ಷಗಳನ್ನು ಪೂರೈಸಿದೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ 9 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯ ಯೋಜನೆಗಳ ಯಶಸ್ವಿ ಅನುಷ್ಠಾನ, ಸಾಮಾಜಿಕ ಸುರಕ್ಷತಾ ಯೋಜನೆಗಳ ಜಾರಿ ಸೇರಿದಂತೆ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಜೂನ್ 30ರವರೆಗೆ ಮಹಾ ಸಂಪರ್ಕ ಅಭಿಯಾನವನ್ನು ಬಿಜೆಪಿ ಕೈಗೊಂಡಿದೆ ಎಂದರು.
ಕೇಂದ್ರ ಸರಕಾರದ ಅನುದಾನದಿಂದ ಲೋಕಸಭಾ ಕ್ಷೇತ್ರಗಳಲ್ಲಿ ಕೈಗೊಂಡ ಮೂಲಸೌಕರ್ಯಗಳ ವಿವರ ಕೊಡಲಾಗುವುದು. ಪ್ರಬುದ್ಧರ ಸಭೆ, ವ್ಯಾಪಾರಸ್ಥರ ಸಭೆ, ಯೋಗ ದಿನ ಆಚರಣೆ ಸೇರಿ ಅನೇಕ ಆಯಾಮಗಳಲ್ಲಿ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣಾ ತಯಾರಿ ದೃಷ್ಟಿಕೋನದಿಂದ ಕೆಲಸ ನಿರ್ವಹಿಸಲಾಗುವುದು ಎಂದು ವಿವರಿಸಿದರು. ಇವತ್ತು ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ದ ಲೋಕಸಭಾ ಸದಸ್ಯರ ಸಭೆ ನಡೆಸಲಾಗಿದೆ. ಈ ವಿಚಾರಗಳ ಚರ್ಚೆ ನಡೆದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಸಂಕಲ್ಪದೊಂದಿಗೆ, ಕಾರ್ಯತಂತ್ರ ಮತ್ತು ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.