ಯಲಹಂಕ (ಬೆಂಗಳೂರು) :ಹದಿನಾಲ್ಕು ವರ್ಷ ಸಂಸಾರ ನಡೆಸಿದ ತನ್ನದೇ ಮನೆಗಾಗಿ ಮಕ್ಕಳ ಜೊತೆ ತಾಯಿ ತನ್ನ ಮನೆಯ ಮುಂದೆಯೇ ಪ್ರತಿಭಟನೆ ನಡೆಸುತ್ತಿರುವ ಘಟನೆ ನಡೆದಿದೆ. ಮನೆ ಕಳೆದುಕೊಂಡಿರುವ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ಹೊತ್ತು ಪ್ರತಿಭಟನೆ ದಾರಿ ತುಳಿದಿದ್ದಾರೆ. ತನ್ನ ಮನೆ ಮುಂದೆ ಕುಳಿತ್ತಿರುವ ಮಹಿಳೆ ನನ್ನ ಮನೆ.. ನನ್ನ ಹಕ್ಕು.. ನನ್ನ ಕಾನೂನು.. ನನ್ನ ಸಂವಿಧಾನ ಅಂತಾ ಬೋರ್ಡ್ ಹಿಡಿದು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಅಂದಹಾಗೇ ಪ್ರತಿಭಟನೆ ನಡೆಸುತ್ತಿರುವ ಇವರ ಹೆಸರು ಪುಷ್ಪವತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗಾಳಿಪೂಜೆ ಗ್ರಾಮದವರು. ಹದಿನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಹೆಗಡೆ ನಗರದ ಮುಂಜುನಾಥ್ ಇವರನ್ನು ಮದುವೆಯಾಗಿದ್ದು, ಹೆಗಡೆ ನಗರದ 1ನೇ ಕ್ರಾಸ್ ನಲ್ಲಿ ವಾಸವಾಗಿದ್ದರು. ಇವರ ದಾಪಂತ್ಯಕ್ಕೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗನಿದ್ದು, ಮಂಜುನಾಥ್ ಸಹೋದರರು ಸಹ ಜೊತೆಯಲ್ಲಿ ವಾಸವಾಗಿದ್ದರು.
ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮಂಜುನಾಥ್ ಇತ್ತಿಚೇಗೆ ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದು, ಅಣ್ಣನ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ತಮ್ಮಂದಿರಾದ ಸುರೇಶ್ ಮತ್ತು ಅಂಜಿನಪ್ಪ ಅಣ್ಣನ ಮನೆಯನ್ನು ಹೊಡೆಯುವ ಸಂಚು ನಡೆಸಿದ್ದಾರೆ. ಅಣ್ಣನಿಗೆ ಕುಡಿಸಿ ಇಲ್ಲದ ಸಲ್ಲದ ಚಾಡಿ ಹೇಳಿ ಗಂಡ ಹೆಂಡತಿಯರ ನಡುವೆ ವಿರಸ ಮೂಡಿಸಿದ್ದಾರೆ. ಮತ್ತು 20 ಲಕ್ಷ ಹಣಕ್ಕೆ ಮನೆಯನ್ನು ಖರೀದಿ ಮಾಡಿದ್ದಾರೆ. ಆದರೆ 20 ಲಕ್ಷ ಹಣದಲ್ಲಿ ಒಂದು ರೂಪಾಯಿ ಸಹ ನಮ್ಮ ಕೈಗೆ ಬಂದಿಲ್ಲ.
ಬಳಿಕ ಮೇ 26 ರಂದು ಸಂಜೆ 6:30 ಸಮಯದಲ್ಲಿ ಪುಷ್ಪಲತಾ ದೇವಸ್ಥಾನಕ್ಕೆ ಹೋಗಿದ್ದ ಸಮಯದಲ್ಲಿ ಮನೆಗೆ ನುಗ್ಗಿದ ಸುರೇಶ್ ಮನೆಯಲ್ಲಿದ್ದ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಜೊತೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಲತಾ ತನ್ನ ಗಂಡನ ಸಹೋದರರ ವಿರುದ್ಧ ಆರೋಪ ಮಾಡಿದ್ದಾರೆ.